• Slide
  Slide
  Slide
  previous arrow
  next arrow
 • ಗೇರುಸೊಪ್ಪಾ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ: ಜೀವಭಯದಲ್ಲಿ ಸಂಚರಿಸಬೇಕಾದ ದುಃಸ್ಥಿತಿ

  300x250 AD

  ಹೊನ್ನಾವರ: ಪಟ್ಟಣದಿಂದ ಗೇರುಸೊಪ್ಪಾ ಮೂಲಕ ಶಿವಮೊಗ್ಗ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರ ದ್ವಿಪಥ ರಸ್ತೆ ಹೊಂಡಮಯವಾಗಿದ್ದು, ವಾಹನ ಸವಾರರು ಜೀವಭಯದಲ್ಲೆ ಸಂಚರಿಸಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ.

  ಪಟ್ಟಣದ ಗೇರುಸೊಪ್ಪಾ ಸರ್ಕಲ್ ಮೂಲಕ ಶಿವಮೊಗ್ಗ ಸಂಪರ್ಕಿಸುವ ಹೆದ್ದಾರಿ ಕಾಮಗಾರಿ ನಡೆದು ದಶಕಗಳೆ ಊರುಳಿದ್ದು, ಆಗಾಗ ಹೊಂಡಕ್ಕೆ ತೇಪೆ ಹಚ್ಚುವ ಕಾರ್ಯ ನಡೆಯುತ್ತಿತ್ತು. ಕಳೆದ ಎರಡು ವರ್ಷದ ಹಿಂದೆ ಅಲ್ಲಲ್ಲಿ ಡಾಂಬರಿಕರಣ ನಡೆಸಿದ್ದು, ಬಿಟ್ಟರೆ ಮತ್ತೆ ಈ ಬಗ್ಗೆ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಯೋಚಿಸಿಯೇ ಇಲ್ಲ. ಇದರ ಪರಿಣಾಮ ಇದೀಗ ರಸ್ತೆ ಹೊಂಡಮಯವಾಗಿ, ಗ್ರಾಮೀಣ ಭಾಗದ ರಸ್ತೆಗಿಂತ ಕಡೆಯಾಗಿದೆ. ರಸ್ತೆ ಅಂಚಿನ ಗಟಾರ ಮುಚ್ಚಿದ್ದು, ಮಳೆ ಬಂದಾಗ ನೀರು ರಸ್ತೆ ಮೇಲೆ ಹರಿಯುತ್ತಿದೆ. ರಸ್ತೆ ಪಕ್ಕದಲ್ಲೆ ಬೃಹತ್ ಮುಳ್ಳಿನ ಗಿಡಗಳು ರಸ್ತೆಯ ಇಕ್ಕೆಲಗಳತ್ತ ಆಗಮಿಸಿ ಪಾದಾಚಾರಿಗಷ್ಟೆ ಅಲ್ಲ, ವಾಹನ ಸಂಚರಿಸಲೂ ಸಮಸ್ಯೆ ಆಗುತ್ತಿದೆ. ರಸ್ತೆಯ ಎರಡು ಭಾಗದಲ್ಲಿ ಸೂಚನಾ ಫಲಕವು ತುಕ್ಕು ಹಿಡಿದಿದ್ದು ಒಂದಡೆಯಾದರೆ, ಇನ್ನು ಕೆಲವು ಫಲಕಗಳು ಈಗಲೋ ಆಗಲೊ ಮುರಿದು ಬೀಳುವ ಸ್ಥಿತಿಯಲ್ಲಿದೆ. ಪಟ್ಟಣದಲ್ಲಿ ಸೂಚನಾ ಫಲಕದ ಬಳಿ ಬೃಹತ್ ಬ್ಯಾನರ್ ಅಳವಡಿಸುದರಿಂದ ಮಾಹಿತಿ ನೀಡಬೇಕಾದ ಫಲಕಗಳು ಹುಡುಕುವ ಸ್ಥಿತಿ ಎದುರಾಗಿದೆ. ರಸ್ತೆ ಹೊಂಡಮಯ ಅಷ್ಟೆ ಅಲ್ಲದೆ ಜಲ್ಲಿಕಲ್ಲುಗಳು ಕಿತ್ತು ಬಂದಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿದೆ.

  ಮೂಡಗಣಪತಿ ಕ್ರಾಸ್, ಆರೊಳ್ಳಿ, ಬಾಳೆಗದ್ದೆ, ಹಡಿನಬಾಳ ಭಾಗದಲ್ಲಿ ತಿರುವು ಹಾಗೂ ಇಳಿಮುಖ ರಸ್ತೆ ಇದ್ದು, ಈ ಭಾಗದಲ್ಲಿ ರಸ್ತೆ ಹೊಂಡಮಯವಾಗಿದ್ದು ದ್ವಿಚಕ್ರ ವಾಹನ ಪ್ರತಿನಿತ್ಯ ಅಪಘಾತ ಸಂಭವಿಸುತ್ತಿದೆ. ಅಪಾಯಕಾರಿ ತಿರುವು ಇರುವ ಈ ಪ್ರದೇಶದಲ್ಲಿ ರಸ್ತೆ ತೀರಾ ಹದಗೆಟ್ಟಿರುವುದು ಒಂದಡೆಯಾದರೆ, ಬಾಳೆಗದ್ದೆ ಕ್ರಾಸ್ ಬಳಿ ಮಳೆ ಬಂದಾಗ ಚರಂಡಿ ನೀರು ಹೆದ್ದಾರಿಗೆ ಬರುತ್ತಿದ್ದರೂ, ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ತಾಲೂಕಿನಲ್ಲಿ ಐ.ಆರ್.ಬಿ ಕಂಪನಿಯು ರಸ್ತೆ ಕಾಮಗಾರಿ ನಿರ್ವಹಿಸುದರಿಂದ ಸದ್ಯ ಇಲಾಖೆಗೆ ಈ ರಸ್ತೆ ಮಾತ್ರ ಬರುತ್ತಿದ್ದರೂ ರಸ್ತೆ ಸುಧಾರಣೆಯ ಬಗ್ಗೆ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ.

  ತಾಲೂಕಿಗೆ ಎರಡು ಶಾಸಕರು ಇದ್ದರೂ ಈ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ. ಸಮಸ್ಯೆ ಹೇಳಲು ತಾಲೂಕಿನ ಶಾಸಕರ ಕಛೇರಿಗೆ ಶಾಸಕರೆ ಬರುವುದಿಲ್ಲ. ಕೆಡಿಪಿ ಸಭೆ ನಡೆಸಲು ಈರ್ವರು ಶಾಸಕರಿಗೂ ಪುರಸೊತ್ತಿಲ್ಲ. ಅಧಿಕಾರಿಗಳು ಆಡಿದ್ದೆ ಆಟ, ಜನಸಾಮನ್ಯರ ಗೋಳು ಕೇಳುವರಿಲ್ಲ ಎನ್ನುವುದು ತಾಲೂಕಿನ ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ. ಕುಮಟಾ ಶಾಸಕರ ಕ್ಷೇತ್ರ ವ್ಯಾಪ್ತಿ ಕವಲಕ್ಕಿಯವರೆಗೆ ಬರಲಿದ್ದು, ನಂತರದ ಭಾಗ ಭಟ್ಕಳ ಕ್ಷೇತ್ರಕ್ಕೆ ಬರಲಿದೆ. ಕುಮಟಾ ಶಾಸಕರ ಕಛೇರಿ ಬೀಗ ತೆಗೆಯದೆ ಮೂರು ವರ್ಷ ಕಳೆದಿದ್ದು, ಭಟ್ಕಳ ಶಾಸಕರ ಕಛೇರಿಯು ಆಪ್ತ ಸಹಾಯಕರ ಕಛೇರಿಯಾಗಿದ್ದು, ಶಾಸಕರ ಆಪ್ತರ ವಿಶ್ರಾಂತಿ ಕೊಠಡಿಯಾಗಿ ಬದಲಾಗಿದೆ. ಇನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಕೆಡಿಪಿ ಸಭೆಯನ್ನು ಕುಮಟಾ ಶಾಸಕರು ಒಮ್ಮೆಯೂ ನಡೆಸಿಲ್ಲ. ಭಟ್ಕಳ ಶಾಸಕರು ಬೆರೆಳೆಣಿಕೆಯಷ್ಟು ಬಾರಿ ನಡೆಸಿದ್ದಾರೆ. ಹೀಗಿರುವಾಗ ಅಧಿಕಾರಿಗಳು ಜನಪ್ರತಿನಿಧಿಗಳ ಮಾತು ಕೇಳಲು ಹೇಗೆ ಸಾಧ್ಯ ಎಂದು ಜನಸಾಮನ್ಯರು ಪ್ರಶ್ನಿಸುತ್ತಿದ್ದಾರೆ.

  ಮಳೆಗಾಲದಲ್ಲಿ ಡಾಂಬರೀಕರಣ ನಡೆಸಲು ಸಾಧ್ಯವಿಲ್ಲ ಎಂದು ಬೇಸಿಗೆಯಲ್ಲಿ ನೀತಿ ಸಂಹಿತೆ ಹಾಗೂ ಅನುದಾನದ ಕೊರತೆಯ ಕಾರಣ ನೀಡಿ ಕಾಲಹರಣ ನಡೆಸುವ ಅಧಿಕಾರಿಗಳಿಗೆ ಮುಂದಿನ ದಿನದಲ್ಲಾದರೂ ತಿಳಿ ಹೇಳುವ ಮೂಲಕ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ಮುಂದಾಗಬೇಕಿದೆ.

  300x250 AD

  ಕೋಟ್…

  ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಧಾನಿ ನರೆಂದ್ರ ಮೋದಿ ಆಗಮಿಸುವುದಿದ್ದರೆ ರಸ್ತೆಯನ್ನು ರಾತ್ರೋ ರಾತ್ರಿ ಡಾಂಬರೀಕರಣ ನಡೆಸಿದ್ದನ್ನು ನೋಡಿದ್ದೇವೆ. ಈ ಹೆದ್ದಾರಿಯಲ್ಲಿಯೂ ಒಮ್ಮೆ ಪ್ರಧಾನಿಗಳು ಆಗಮಿಸಲಿ. ಆಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಗೆ ಡಾಂಬರೀಕರಣ ಮಾಡಿಸುತ್ತಾರೆ. ಜನಸಾಮನ್ಯರ ಕಷ್ಟ ಇವರ ಅರಿವಿಗೆ ಬರುವುದಿಲ್ಲ…· ಸಂತೋಷ ನಾಯ್ಕ, ಸ್ಥಳೀಯ ನಿವಾಸಿ

  ಈರ್ವರು ಶಾಸಕರು ಹೊನ್ನಾವರಕ್ಕೆ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಇಲ್ಲಿಯ ಸಮಸ್ಯೆಯ ಬಗ್ಗೆ ವಿರೋಧ ಪಕ್ಷದಲ್ಲಿದ್ದಾಗ ಭಾಷಣ ಮಾಡಿ, ಅಧಿಕಾರಿದಲ್ಲಿದ್ದಾಗ ಮೌನ ವಹಿಸುತ್ತಾರೆ. ಯಾವ ಪಕ್ಷದ ಜನಪ್ರತಿನಿಧಿಯು ಇದಕ್ಕೆ ಭಿನ್ನವಾಗಿಲ್ಲ. ಇನ್ನು ಸಂಸದ ಅನಂತಕುಮಾರ ಹೆಗಡೆ ಮತ ಕೇಳಲು ಮಾತ್ರ ಹೊನ್ನಾವರಕ್ಕೆ ಬರಲಿದ್ದು, ಇಲ್ಲಿಯ ಸಮಸ್ಯೆ ಅವರಿಗೆ ಬೇಕಿಲ್ಲ. ಎರಡು ತಿಂಗಳಲ್ಲಿ ಹೆದ್ದಾರಿ ಹೊಂಡ ಮುಕ್ತಿ ಕಾಣದೆ ಇದ್ದಲ್ಲಿ ವಿವಿಧ ಸಂಘಟನೆಯ ಬೆಂಬಲದಿಂದ ಅನಿವಾರ್ಯವಾಗಿ ಸಂಬಂಧಿಸಿದ ಅಧಿಕಾರಿಗಳ ಕಛೇರಿಗೆ ಬೀಗ ಹಾಕಿ ಪ್ರತಿಭಟನೆಗೆ ಮುಂದಾಗುತ್ತೇವೆ…· ಶ್ರೀನಿವಾಸ ನಾಯ್ಕ, ವಾಹನ ಸವಾರ

  Share This
  300x250 AD
  300x250 AD
  300x250 AD
  Leaderboard Ad
  Back to top