ಕುಮಟಾ: ತಾಲೂಕಿನ ಹೊಳೆಗದ್ದೆ ಟೋಲ್ ನಲ್ಲಿ ರಾಜ್ಯದಲ್ಲಿಯೇ ಅಧಿಕ ಟೋಲ್ ಸಂಗ್ರಹಿಸುತ್ತಿದ್ದು, ಜನಪ್ರತಿನಿಧಿಗಳು ಮಾತ್ರ ಕಣ್ಣಿದ್ದು ಕುರುಡಂತೆ ವರ್ತಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಭಾಸ್ಕರ್ ಪಟಗಾರ್ ಕಿಡಿಕಾರಿದ್ದಾರೆ.
ಹೊಳೆಗದ್ದೆಯ ಐ.ಆರ್.ಬಿ ಟೋಲ್‌ನಲ್ಲಿ ರಾಜ್ಯದ ಟೋಲ್ ಗಿಂತ ದುಪ್ಪಟ್ಟು ಟೋಲ್ ಸಂಗ್ರಹಿಸುತ್ತಿದ್ದಾರೆ. ಅಂಕೋಲಾದಿಂದ ಕುಮಟಾದವರೆಗೆ ಕಿಲೋ ಮೀಟರ್ ನಲ್ಲೂ ಕಡಿಮೆ ಇದ್ದರು ಹೆಚ್ಚಿನ ಹಣ ಸಂಗ್ರಹ ಮಾಡಲಾಗುತ್ತಿದೆ. ಕಾರೊಂದಕ್ಕೆ ಟೋಲ್ ನಲ್ಲಿ ಸಾಗಬೇಕಾದರೆ 95 ರೂಪಾಯಿ ದುಬಾರಿ ಹಣ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದ್ದು ಇದು ದುರಂತವಾಗಿದೆ ಎಂದು ಭಾಸ್ಕರ್ ಪಟಗಾರ್ ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇನ್ನೂ ಕಾಮಗಾರಿ ಮುಗಿದಿಲ್ಲ. ಆದರೂ ಟೋಲ್ ಸಂಗ್ರಹಿಸಿ ಹಗಲು ದರೋಡೆಯನ್ನ ಐ.ಆರ್.ಬಿ ಮಾಡುತ್ತಿದೆ. ಕಾರಿನಲ್ಲಿ ಸಾಗುವವರಿಗೆ ತಿಂಗಳಿಗೆ ದುಬಾರಿ ಹಣ ಕಟ್ಟಿ ಪಾಸ್ ಪಡೆಯುವಂತೆ ಬೋರ್ಡ್ ಹಾಕಲಾಗಿದೆ. ಜನಪ್ರತಿನಿಧಿಗಳು ಟೋಲ್ ಬಳಿ ಬಂದು ಸುಮ್ಮನೇ ನೋಡಿ ವಾಪಾಸ್ ಹೋಗುತ್ತಿದ್ದು ಯಾರು ಈ ಬಗ್ಗೆ ಧ್ವನಿ ಎತ್ತದಂತಾಗಿದೆ. ಇಷ್ಟೊಂದು ದುಬಾರಿ ಬೆಲೆ ಕಡಿಮೆ ಮಾಡದಿದ್ದರೆ ಮುಂದಿನ ವಾರ ಟೋಲ್ ಗೆ ನುಗ್ಗಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಭಾಸ್ಕರ್ ಪಟಗಾರ್ ಎಚ್ಚರಿಸಿದ್ದಾರೆ.
ಎರಡೇ ವರ್ಷದಲ್ಲಿ 20 ರೂಪಾಯಿ ಏರಿಕೆ: ಹೊಳೆಗದ್ದೆ ಟೋಲ್ ಪ್ರಾರಂಭ ಮಾಡಿದಾಗ 75 ರೂಪಾಯಿಯನ್ನ ಕಾರಿನವರಿಂದ ಪಡೆಯಲಾಗುತ್ತಿತ್ತು. ಆದರೆ ಈಗ 95 ರೂಪಾಯಿಯನ್ನ ಪಡೆಯಲಾಗುತ್ತಿದೆ. ಎರಡೇ ವರ್ಷದಲ್ಲಿ ಇಪ್ಪತ್ತು ರೂಪಾಯಿ ಏರಿಕೆಯಾಗಿದ್ದು ಟೋಲಿಗೂ ಬೆಲೆ ಏರಿಕೆ ತಟ್ಟಿದೆ. ಟೋಲ್ ನಲ್ಲಿ ಬೆಲೆ ಏರಿಕೆ ಮಾಡುವ ಪರಿಸ್ಥಿತಿಯಾದರು ಏನಿದು. ಕಾಮಗಾರಿಯೂ ಇನ್ನು ಅಪೂರ್ಣವಿದ್ದು ಬೆಲೆ ಏರಿಕೆ ಮಾಡುವುದರಿಂದ ಜನರ ಮೇಲೆ ಹೊರೆಯಾಗುತ್ತಿದ್ದು ಜನಪ್ರತಿನಿಧಿಗಳು ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಇಲ್ಲದಿದ್ದರೇ ಜನರೇ ರೊಚ್ಚಿಗೇಳುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಭಾಸ್ಕರ್ ಪಟಗಾರ್ ತಿಳಿಸಿದ್ದಾರೆ.
ಕಾರವಾರದ ಹಟ್ಟಿಕೇರಿಯ ಟೋಲ್ ನಲ್ಲಿ ಸಹ ದುಬಾರಿ ಮೊತ್ತ ಸಂಗ್ರಹಿಸಲಾಗುತ್ತಿದೆ. ಕಾರವಾರದಿಂದ ಅಂಕೋಲಾ ನಡುವೆ ಇನ್ನು ಸರಿಯಾಗಿ ಕಾಮಗಾರಿಯೇ ಮುಗಿದಿಲ್ಲ. ಜನರು ಟೋಲ್ ಕಟ್ಟಿ ಹೊಂಡ ಇರುವ ರಸ್ತೆಯಲ್ಲಿ ಸಾಗಬೇಕಾಗಿದೆ. ರಸ್ತೆ ಸರಿಯಾಗಿ ಆಗದಿದ್ದರೂ ಟೋಲ್ ಕಟ್ಟಿಸಿಕೊಳ್ಳುತ್ತಿರುವುದು ಹಗಲು ದರೋಡೆಯಾಗಿದ್ದು, ಇದಕ್ಕೆ ಧ್ವನಿ ಎತ್ತದಂತೆ ದೊಡ್ಡವರು ಶಾಮಿಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.