ಸಿದ್ದಾಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿರಸಿ- ಸಿದ್ದಾಪುರ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕು.ನಾಮಧಾರಿ ಸಮುದಾಯದವರನ್ನು ಅಭ್ಯರ್ಥಿಯಾಗಿಸುವುದಾದರೇ ನನ್ನನ್ನು ಪರಿಗಣಿಸಬೇಕು ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ವಿ.ಎನ್.ನಾಯ್ಕ ಬೇಡ್ಕಣಿ ನಾಯಕರುಗಳಲ್ಲಿ ಹಕ್ಕೊತ್ತಾಯ ಮಾಡಿಕೊಂಡಿದ್ದಾರೆ. ಈ ಕುರಿತು ಒಂದು ನಿಯೋಗ ಬೆಂಗಳೂರಿನಲ್ಲಿ ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವಾ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ ಅವರನ್ನು ಭೇಟಿಯಾಗಿ ವಿನಂತಿಸಿಕೊಂಡಿದೆ.
ಶಿರಸಿ- ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಳೆದ 30 ವರ್ಷಗಳಿಂದ ಶಾಸಕರನ್ನು ಕಾಣಲು ಸಾಧ್ಯವಾಗಿಲ್ಲ. ಕ್ಷೇತ್ರದಲ್ಲಿ ಹಿಂದುಳಿದ ವರ್ಗದವರೆ ಹೆಚ್ಚಾಗಿದ್ದಾರೆ. ಅದರಲ್ಲಿಯೂ ಬಹುಸಂಖ್ಯಾತ ಮತದಾರರು ನಾಮಧಾರಿ ಸಮುದಾಯದವರಾಗಿದ್ದಾರೆ. ಈ ಕಾರಣಕ್ಕೆ ಪಕ್ಷವು ನಾಮಧಾರಿ ಸಮಾಜದವರನ್ನು ಅಭ್ಯರ್ಥಿಯಾಗಿಸುವುದಾದರೆ ವಿ.ಎನ್.ನಾಯ್ಕ ಅವರನ್ನು ಅಭ್ಯರ್ಥಿ ಮಾಡಬೇಕು. ಅವರಿಗೆ ಪಕ್ಷದಲ್ಲಿ ಇರುವ ಹಿರಿತನ, ಮಾಡಿರುವ ಸೇವೆಯನ್ನು ಪರಿಗಣಿಸಿ ಪಕ್ಷ ಟಿಕೆಟ್ ನೀಡಬೇಕು ಎಂದು ನಾಯಕರುಗಳಲ್ಲಿ ವಿನಂತಿಸಿಕೊಂಡಿದ್ದಾರೆ.
ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾಗಿರುವ ವಿ.ಎನ್.ನಾಯ್ಕ ಬೇಡ್ಕಣಿ ಹೆಸರು ಈ ಹಿಂದೆ ಕೂಡ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಮುಖವಾಗಿ ಕೇಳಿಬಂದಿತ್ತು. ವಿ.ಎನ್.ನಾಯ್ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತು ಜಿ.ಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.ಜಿಲ್ಲೆಯ ನಾಯಕರುಗಳ ಒಡನಾಟವಿದೆ. ಮುಖ್ಯವಾಗಿ ಮಾಜಿ ಸಂಸದೆ ಮಾರ್ಗರೇಟ್ ಆಳ್ವಾ ಅವರೊಂದಿಗೆ ರಾಜಕೀಯವಾಗಿ ಗುರುತಿಸಿಕೊಂಡವರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ, ದಿನೇಶ ಗುಂಡುರಾವ ಮೊದಲಾದ ನಾಯಕರುಗಳೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದಿದ್ದಾರೆ.
ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ರಾಜಕೀಯವಾಗಿ ಗುರುತಿಸಿಕೊಂಡಿರುವ ವಿ.ಎನ್.ನಾಯ್ಕ ಬೇಡ್ಕಣಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿರುವ ನಾಯಕರಾಗಿದ್ದಾರೆ. ತಾಲೂಕ ನಾಮಧಾರಿ ಸಮಾಜದವರ ಅಭಿವೃದ್ಧಿ ಸಂಘದ ಉಪಾಧ್ಯಕ್ಷರಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೇಡ್ಕಣಿಯ ಕೋಟೆ ಹನುಮಂತ ದೇವಾಲಯದ ಅಧ್ಯಕ್ಷರಾಗಿ, ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾರ್ವಜನಿಕವಾಗಿ ಎಲ್ಲಾ ಸಮುದಾಯದವರೊಂದಿಗೆ ಒಳ್ಳೆಯ ಒಡನಾಟವನ್ನು ಹೊಂದಿದ್ದಾರೆ.
ವಿ.ಎನ್.ನಾಯ್ಕ ಬೇಡ್ಕಣಿಯವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು ಎಂದು ನಾಯಕರುಗಳ ಭೇಟಿಯಾದ ನಿಯೋಗದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸಾವೇರ್ ಡಿ,ಸೀಲ್ವಾ, ತಾಲೂಕ ಪಂಚಾಯತ ನಿಕಟಪೂರ್ವ ಸದಸ್ಯರಾದ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನಾಸೀರ್ ಖಾನ್, ತಾಲೂಕ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಗಂಗಾಧರ ಮಡಿವಾಳ ಕಡಕೇರಿ, ಇಂಟೆಕ್ ತಾಲೂಕ ಅಧ್ಯಕ್ಷ ರಾಮಕೃಷ್ಣ ನಾಯ್ಕ ಶಿರೂರು, ಲಂಬೋದರ ಹೆಗಡೆ ಮೊದಲಾದವರಿದ್ದರು