ಶಿರಸಿ: ಮಕ್ಕಳು ಕೇವಲ ಮಾಕ್ಸ೯ವಾದಿಗಳಾಗದೇ ಸಾಂಸ್ಕೃತಿಕ, ಸಾಹಿತ್ಯದಲ್ಲೂ ತೊಡಗಿಕೊಳ್ಳಬೇಕು ಎಂದು ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಹೇಳಿದರು.
ಸೋಮವಾರ ಯಡಹಳ್ಳಿಯ ವಿದ್ಯೋದಯ ವಿದ್ಯಾಲಯದಲ್ಲಿ ನಾಟಕ ಅಕಾಡೆಮಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಬಹುಮಾನ ವಿತರಿಸಿ ಮಾತನಾಡಿ, ಮಕ್ಕಳು ಪಠ್ಯೇತರದಲ್ಲಿ ತೊಡಗಿಕೊಂಡರೆ ಬದುಕಿನಲ್ಲಿ ಎದುರಾಗುವ ಸವಾಲು ಎದುರಿಸಲು ಸಾಧ್ಯ ಎಂದರು.
ಜೀವನವೇ ಒಂದು ನಾಟಕ ರಂಗ. ಅಪ್ಪನಾಗಿ, ಅಕ್ಕನಾಗಿ, ಅಣ್ಣನಾಗಿ ಬದುಕಿನ ಬೇರೆ ಬೇರೆ ಕಡೆ ಹೌದೇ ಹೌದು ಎನ್ನುವಂತೆ ನಾಟಕ ಮಾಡುತ್ತೇವೆ. ಕಲಿತು ಮಾಡುವ ನಾಟಕ ಬೇರೆ ಎಂದು ಮಾರ್ಮಿಕವಾಗಿ ನುಡಿದರು. ಓದನ್ನೊಂದೇ ಕಟ್ಟಿಕೊಂಡು ಬೆಳೆಯದೇ ಭರತನಾಟ್ಯ, ಯಕ್ಷಗಾನ, ನಾಟಕವನ್ನು ಕಲಿಯಬೇಕು ಎಂದ ಅವರು, ನಾಟಕದಲ್ಲೂ ಒಳ್ಳೆಯ ನಟ, ನಟಿ ಎಂದೂ ಗುರುತಿಸಿ ಪ್ರಶಸ್ತಿ ಕೊಡಬೇಕು ಎಂದರು.
ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ನಿರಂಜನ ಹೆಗಡೆ ವಹಿಸಿದ್ದರು. ಅತಿಥಿಗಳಾಗಿ ಅಕಾಡೆಮಿ ಅಧ್ಯಕ್ಷ ಆರ್.ಭೀಮಸೇನ, ಕಾಲೇಜಿನ ಪ್ರಾಚಾರ್ಯ ಆರ್.ಟಿ.ಭಟ್ಟ, ನಿರ್ಣಾಯಕರಾದ ಗುರುಮೂರ್ತಿ ವರದಾಮೂಲ, ಅನಂತ ಭಟ್ಟ ಹುಳಗೋಳ, ನಾಗರಾಜ ನಾಯ್ಕ ಇತರರು ಇದ್ದರು. ಗಣಪತಿ ಹಿತ್ಲಕೈ ಸ್ವಾಗತಿಸಿದರು. ರೂಪಾ ಕಡ್ನಮನೆ ನಿರ್ವಹಿಸಿದರು.
ಅಳ್ಳಂಕಿ ಪ್ರಥಮ, ಮಾರಿಕಾಂಬಾ ದ್ವಿತೀಯ: ನಾಟಕ ಅಕಾಡೆಮಿ ನಡೆಸಿದ ಜಿಲ್ಲಾ ಮಟ್ಟದ ಪ್ರೌಢಶಾಲಾ ಹಂತದ ನಾಟಕ ಸ್ಪರ್ಧೆಯಲ್ಲಿ ಹೊನ್ನಾವರದ ಅಳ್ಳಂಕಿಯ ಅಂಬೇಡ್ಕರ ವಸತಿ ಶಾಲೆಯ ‘ಸೃಷ್ಟಿಯ ಕೊನೆಯ ಮನುಷ್ಯ’ ನಾಟಕ ಪ್ರಥಮ, ಶಿರಸಿ ಮಾರಿಕಾಂಬಾ ಪ್ರೌಢಶಾಲೆಯ ‘ಒಂದು ಲಸಿಕೆಯ ಕಥೆ’ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಯಲ್ಲಾಪುರ ವಜ್ರಳ್ಳಿ ಸರ್ವೋದಯ ಪ್ರೌಢಶಾಲೆಯ ‘ಅಕಟಕಟ’ ನಾಟಕ ತೃತೀಯ ಸ್ಥಾನ ಪಡೆದಿದೆ. ಒಟ್ಟೂ ಎಂಟು ತಂಡಗಳು ಉಭಯ ಶೈಕ್ಷಣಿಕ ಜಿಲ್ಲೆಯಿಂದ ಪಾಲ್ಗೊಂಡಿದ್ದವು.