ಸಿದ್ಧಾಪುರ: ಪ್ರಸಕ್ತ ವರ್ಷದ ಅತೀವೃಷ್ಟಿಯಿಂದ ಅಡಿಕೆ ಮತ್ತು ಭತ್ತ ಬೆಳೆಗಾರರು ತೀವೃ ನಷ್ಟಕ್ಕೆ ಒಳಗಾಗಿದ್ದು ವಿಧಾನಸಭೆ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಬೇಕೆಂದು ಜಿಲ್ಲೆಯ ಶಾಸಕರುಗಳಿಗೆ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
ಅವರು ಸಿದ್ಧಾಪುರ ತಾಲೂಕಿನ, ಅಣಲೆಬೈಲ್ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿನ ಬೆಳೆನಷ್ಟಕ್ಕೆ ಒಳಗಾದ ವಿವಿಧ ಗ್ರಾಮಗಳಿಗೆ ಭೇಟಿಕೊಟ್ಟು ಮೇಲಿನಂತೆ ಹೇಳಿದರು.
ಇತ್ತೀಚಿನ ವಾಡಿಕೆಗಿಂತ ಹೆಚ್ಚಿನ ಮಳೆಯಿಂದ ಅಡಿಕೆ ಬೆಳೆಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಉಂಟಾಗಿದ್ದು ಕೊಳೆರೋಗ, ಅಡಿಕೆ ಉದುರುವಿಕೆ ಮುಂತಾದ ಬೆಳೆಗಾರರ ಸಮಸ್ಯೆಗಳನ್ನ ಸರಕಾರ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಅದರಂತೆ ಭತ್ತದ ಬೆಳೆಯಿಂದಲೂ ಸಹಿತ ಅತೀವೃಷ್ಟಿಯಿಂದ ಬೆಳೆಗಾರರು ನಷ್ಟದ ಭೀತಿ ಎದುರಿಸುತ್ತಿರುವುದರಿಂದ ಜಿಲ್ಲೆಯ ಶಾಸಕರು ಸರಕಾರದಿಂದ ಸೂಕ್ತ ಪರಿಹಾರ ನೀಡುವ ದಿಶೆಯಲ್ಲಿ ಕ್ರಮ ಜರುಗಿಸಬೇಕೆಂದು ಅವರು ಅಗ್ರಹಿಸಿದರು.
ಹತ್ತು ಸಾವಿರ ಹೇಕ್ಟರ್ ಪ್ರದೇಶದಷ್ಟು ವಾಣಿಜ್ಯ ಬೆಳೆಯಾಗಿದ್ದ ಅಡಿಕೆ ಬೇಸಾಯ ಜಿಲ್ಲಾದ್ಯಂತ ರೈತರು ಬೆಳೆಯುವ ಅಡಿಕೆ ಪ್ರಮಾಣ ಸುಮಾರು 15000 ಮ್ಯಾಟ್ರಿಕ್ ಟನ್‌ಗಳಾಗಿದ್ದು, ಬೆಳೆ ನಷ್ಟದಿಂದ ಜಿಲ್ಲೆಯ ಆರ್ಥಿಕ ಸ್ಥಿತಿ-ಗತಿಯ ಮೇಲೆ ಗಂಭೀರ ಪರಿಣಾಮ ಬೀರುವುದೆಂದು ಅವರು ತಿಳಿಸಿದರು.
ರೈತರ ತೀವ್ರ ಆಕ್ರೋಶ: ತೀವ್ರ ಅತೀವೃಷ್ಟಿಯಿಂದ ಅಡಿಕೆ ಬೆಳೆ ಅರ್ಧದಷ್ಟು ನಾಶವಾಗಿದ್ದು, ತೀವೃ ಕೋಳೆರೋಗ ಇಳುವರಿ ಕಡಿಮೆ ಮಾಡಿದೆ. ಭತ್ತಕ್ಕೆ ಬಿಳಿಕೊಳೆ ಮತ್ತು ತುಂಡುಕೊಳೆಯಿಂದ ಭತ್ತ ನಾಶವಾಗಿದ್ದು, ತೀವೃ ಸಂಕಷ್ಟ ಪರಿಸ್ಥಿತಿ ಉಂಟಾಗಿದ್ದು ನಮ್ಮ ಕಷ್ಟಕ್ಕೆ ಅಧಿಕಾರಿಗಳು ಸ್ಫಂದಿಸುತ್ತಿಲ್ಲ. ಸರಕಾರ ಸೂಕ್ತ ಪರಿಹಾರ ನೀಡಲು ಜನಾರ್ಧನ ಗೌಡ, ತಮ್ಮಾಣಿ ಗೌಡ, ಸೀತಾರಾಮ ಗೌಡ ಹುಕ್ಕಳಿ, ಅಜ್ಜು ಗೌಡ ತೀವ್ರ ಆಕ್ರೋಶವನ್ನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಬೀರಾ ಗೌಡ, ಹರಿಹರ ನಾಯ್ಕ, ಎಮ್ ಪಿ ಗೌಡ, ಸೀತಾರಾಮ ಗೌಡ ತೋಟದಗದ್ದಿ, ರವೀಶ್ ಗೌಡ ಗ್ರಾಮ ಪಂಚಾಯತ ಸದಸ್ಯ. ಜಯಂತ ಗೌಡ, ಜ್ಞಾನೇಶ್ ಗೌಡ, ಅನಂತ ಗೌಡ, ನಾರಾಯಣ ಮುಂತಾದವರು ಉಪಸ್ಥಿತರಿದ್ದರು.