ನವದೆಹಲಿ: ನಾಳೆ ಪ್ರಧಾನಿ ನರೇಂದ್ರ ಮೋದಿಗೆ ಹುಟ್ಟು ಹಬ್ಬದ ಸಂಭ್ರಮ. ಮೋದಿ 72ನೇ ವಸಂತಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಈಗಾಗಲೇ ಬಿಜೆಪಿ ರಾಜ್ಯ ರಾಜ್ಯಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಇನ್ನು ನಾಳೆ ಪ್ರಧಾನಿ ಮೋದಿ ಪ್ರಮುಖವಾಗಿ ನಾಲ್ಕು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಾಷಣ ಮಾಡಲಿದ್ದಾರೆ. ವನ್ಯ ಜೀವ ಹಾಗೂ ಪರಿಸರ, ಮಹಿಳಾ ಸಬಲೀಕರಣ, ಕೌಶಲ್ಯ ಮತ್ತು ಅಭಿವೃದ್ಧಿ, ಜನ್ ಇನ್ನಾ ಸೇರಿದಂತೆ ನಾಲ್ಕು ಪ್ರಮುಖ ಕಾರ್ಯಕ್ರಮಗಳಲ್ಲಿ ಮಾತನಾಡಲಿದ್ದಾರೆ.
ಹುಟ್ಟು ಹಬ್ಬದ ದಿನ ಪ್ರಧಾನಿ ಮೋದಿ ಮೊದಲಿಗೆ ಭಾರತಕ್ಕೆ ನಮೀಬಿಯಾದಿಂದ ಚಿರತೆಗಳನ್ನು ತಂದಿರುವ ಸಂತಸ ಹಾಗೂ ವನ್ಯ ಜೀವಿ ಸಮತೋಲನ ಕುರಿತು ಭಾಷಣ ಮಾಡಲಿದ್ದಾರೆ.
ಮಧ್ಯಪ್ರದೇಶದ ಮಹಿಳಾ ಸ್ವಸಹಾಯ ಸಂಘದ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಮೋದಿ ಭಾಷಣ ಮಾಡಲಿದ್ದಾರೆ. ಈ ಸಮಾವೇಶ ಬಳಿಕ ವಿಶ್ವಕರ್ಮ ಜಯಂತಿ ದಿನ ಐಟಿಐ ವಿದ್ಯಾರ್ಥಿಗಳ ಪ್ರಥಮ ದೀಕ್ಷಾಂತ್ ಸಮಾರೋಹದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ 40 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇದೇ ದಿನ ಸಂಜೆ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ ಬಿಡುಗಡೆ ಮಾಡಿ ಮಾತನಾಡಲಿದ್ದಾರೆ.
75 ವರ್ಷಗಳ ಬಳಿಕ ಭಾರತದ ಕಾಡಿಗೆ ಚಿರತೆ ನಮಿಬಿಯಾದಿಂದ ಭಾರತಕ್ಕೆ ತಂದಿರುವ ಚಿರತೆಗಳನ್ನು ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳಗ್ಗೆ 10.45ಕ್ಕೆ ದೇಶದ ಅರಣ್ಯಕ್ಕೆ ಬಿಡುಗಡೆ ಮಾಡಲಿದ್ದಾರೆ. ಆಫ್ರಿಕಾ ಖಂಡದ ನಮೀಬಿಯಾದಿಂದ ಒಟ್ಟು 8 ಚೀತಾಗಳನ್ನು ತರಿಸಿಕೊಳ್ಳಲಾಗುತ್ತಿದೆ. ಈ ಸಂಬಂಧ ವರ್ಷಾರಂಭದಲ್ಲಿ ಒಪ್ಪಂದ ಕೂಡ ಆಗಿದೆ. 8ರಲ್ಲಿ ಐದು ಹೆಣ್ಣು ಚೀತಾಗಳಾದರೆ, ಉಳಿದ ಮೂರು ಗಂಡು ಚೀತಾಗಳಾಗಿವೆ. ಈ ಚೀತಾಗಳನ್ನು ಕರೆತರಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಬೋಯಿಂಗ್ ‘ಎ ಬಿ741 ಜಂಬೋಜೆಟ್’ ವಿಮಾನ ಈಗಾಗಲೇ ನಮೀಬಿಯಾ ರಾಜಧಾನಿ ವಿಂಡ್‌ಹೋಕ್ ತಲುಪಿದೆ. ಮಹಾರಾಜ ರಾಮಾನುಜ ಪ್ರತಾಪ್ ಸಿಂಗ್ ದೇವ್ ಅವರು 1947ರಲ್ಲಿ ಕೊನೆಯ ಚೀತಾವನ್ನು ಕೊಂದಿದ್ದರು. 1952ರಲ್ಲಿ ಭಾರತದಿಂದ ಚೀತಾ ನಾಮಾವಶೇಷವಾಗಿದೆ ಎಂದು ಘೋಷಿಸಲಾಗಿತ್ತು. 2009ರಿಂದ ಚೀತಾ ತರುವ ಪ್ರಯತ್ನಗಳು ನಡೆಯುತ್ತಿದ್ದವಾದರೂ ಅದು ಈಗ ತಾರ್ಕಿಕ ಘಟ್ಟಕ್ಕೆ ತಲುಪಿದೆ.