ಶಿರಸಿ: ನಗರದ ಅಜಿತ ಮನೋಚೇತನ ವಿಕಾಸ ಶಾಲೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ಸೆ.16 ರಂದು ಭೇಟಿ ನೀಡಿದರು.
ಈ ಸಂದರ್ಭದಲ್ಲಿಅಜಿತ ಮನೋಚೇತನದ ಗೌರವ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ಅವರು ವಿಶೇಷ ಚೇತನ ಮಕ್ಕಳು, ವ್ಯಕ್ತಿಗಳಿಗೆ ಮಾಶಾಸನ ನೀಡುವ ಸಂದರ್ಭದಲ್ಲಿ ಸರ್ಕಾರ ಆದಾಯದ ಮಿತಿ ಹಾಕಬಾರದು. ಜೀವನ ಪೂರ್ತಿ ಪಾಲಕರೇ ವಿಕಲಚೇತನರ ಜವಾಬ್ದಾರಿ ನಿರ್ವಹಿಸಬೇಕು.ಆದ್ದರಿಂದ ಸರ್ಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.ಮಹಿಳಾ ಆಯೋಗ ವಿಶೇಷ ಮುತುವರ್ಜಿ ವಹಿಸಬೇಕು ಎಂದು ಮನವಿ ಮಾಡಿದರು. ವಿಶೇಷ ಮಕ್ಕಳಿಗೆ ಹಣ್ಣು ವಿತರಿಸಿದ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ದೇವರ ಸೇವೆ ಮಾಡುತ್ತಿರುವ ಸಂಸ್ಥೆ ಮತ್ತು ಶಿಕ್ಷಕರನ್ನು ಅಭಿನಂದಿಸಿದರು.
ಗಂಡನಿಂದ ತೀವ್ರ ತೊಂದರೆ ,ಹಿಂಸೆ ಅನುಭವಿಸುತ್ತಿದ್ದ ಶಿರಸಿ ಮಹಿಳೆಯೋರ್ವರಿಗೆ ಅಜಿತ ಮನೋಚೇತನ ಮೂಲಕ ಮಹಿಳಾ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರಿಗೆ ಅಗತ್ಯ ಸಹಾಯ ನೀಡಲು ಪ್ರಮಿಳಾ ನಾಯ್ಡು ಸೂಚನೆ ನೀಡಿದರು. ಈ ಮಹಿಳೆಯ ಬುದ್ಧಿಮಾಂದ್ಯ ಮಗುವನ್ನುಅಜಿತ ಮನೋಚೇತನ ಶಾಲೆಗೆ ಸೇರಿಸಲು ನಿರ್ಧರಿಸಲಾಯಿತು. ಮಹಿಳಾ ಸ್ವಆಧಾರ ಕೇಂದ್ರದಲ್ಲಿ ಈ ಸಂತ್ರಸ್ತ ಮಹಿಳೆಗೆ ವಸತಿ ಕಲ್ಪಿಸಲು ತೀರ್ಮಾನಿಸಲಾಯಿತು.ಅಜಿತ ಮನೋಚೇತನ ಭೇಟಿ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು,ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರೀಕ ಸಬಲೀಕರಣ ಅಧಿಕಾರಿಗಳು ಸಿ.ಡಿ.ಪಿ.ಒ ಶಿರಸಿ. ಸಾಂತ್ವನ ಕೇಂದ್ರದ ಸದಸ್ಯರು ಹಾಜರಿದ್ದರು. ಮುಖ್ಯ ಶಿಕ್ಷಕಿ ನರ್ಮದಾ ವಂದಿಸಿದರು.