ಅಂಕೋಲಾ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು ಅವರು ಬಡಗೇರಿಯ ಸುಕ್ರಿ ಗೌಡ ಅವರ ಮನೆಗೆ ಭೇಟಿ ನೀಡಿ, ಅವರನ್ನು ಸನ್ಮಾನಿಸಿ ಕೆಲ ಹೊತ್ತು ಅವರೊಂದಿಗೆ ಸಂತಸದ ಕ್ಷಣಗಳನ್ನು ಕಳೆದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಕ್ರಿ ಗೌಡರನ್ನು ಒಮ್ಮೆ ಭೇಟಿ ಮಾಡಬೇಕೆನ್ನುವ ಅಭಿಲಾಷೆ ಇತ್ತು. ಆ ಅವಕಾಶ ಇಂದು ಒದಗಿ ಬಂದಿದೆ, ಸುಕ್ರೀ ಗೌಡರನ್ನು ಕಂಡು ಅವರ ಆಶೀರ್ವಾದ ಪಡೆದದ್ದು ತುಂಬ ಸಂತೋಷವಾಯಿತು. ಹಾಲಕ್ಕಿ ಸಮಾಜದಿಂದ ಬಂದು ಅವರು ಪಡೆದ ಪ್ರಶಸ್ತಿ, ಸನ್ಮಾನ, ಗೌರವಗಳನ್ನು ನೋಡಿದರೆ ಮಹಿಳಾ ಸಮಾಜಕ್ಕೆ ತುಂಬ ಹೆಮ್ಮೆಯಾಗುತ್ತದೆ. ಅವರು ಅಂಕೋಲಾಕ್ಕೆ ಅಷ್ಟೇ ಅಲ್ಲ ನಮ್ಮ ರಾಜ್ಯಕ್ಕೇ ಒಂದು ದೊಡ್ಡ ಆಸ್ತಿ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ವಿ.ಎಚ್.ಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೋನಲ ಐಗಳ, ಕಾರ್ಮಿಕ ಇಲಾಖೆ ಉಪನಿರ್ದೇಶಕ ಅಕ್ಬರ್ ಮುಲ್ಲಾ, ಅಂಕೋಲಾ ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಸವಿತಾ ಶಾಸ್ತ್ರಿಮಠ, ಸೂಪರ್‌ವೈಸರ್ ಸುರೇಖಾ ನಾಯ್ಕ, ಪಿಎಸ್‌ಐ ಮಾಲಿನಿ ಹಾಸಬಾವಿ ಇದ್ದರು.
ಕೆಎಲ್‌ಇ ವಸತಿ ನಿಲಯಕ್ಕೆ ಭೇಟಿ: ಪಟ್ಟಣದ ಕೆಎಲ್‌ಇ ಸಂಸ್ಥೆಯ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಪ್ರಮೀಳಾ ರೆಡ್ಡಿ, ವಸತಿ ನಿಲಯವನ್ನು ಪರಿಶೀಲನೆ ನಡೆಸಿದರು. ಬಳಿಕ ವಸತಿ ನಿಲಯದ ಮಹಿಳೆಯರೊಂದಿಗೆ ಸಂವಾದ ನಡೆಸಿದರು. ಕೆಎಲ್‌ಇ ಸಂಸ್ಥೆಯ ಮಿನಲ್ ನಾರ್ವೇಕರ ಅವರೊಂದಿಗೆ ಚರ್ಚೆ ನಡೆಸಿ ವಸತಿನಿಲಯದ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು.
ಉದ್ಯೋಗಸ್ಥ ಮಹಿಳೆಯರೊಂದಿಗೆ ಸಂವಾದ ನಡೆಸಿ ಉದ್ಯೋಗ ಮಾಡುವ ಸ್ಥಳದಲ್ಲಿ ಏನಾದರೂ ಮಾನಸಿಕ ಕಿರುಕುಳ, ಲೈಂಗಿಕ ಕಿರುಕುಳ ಆದ ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಬೇಕು, ಯಾರಲ್ಲಿ ದೂರು ನೀಡಬೇಕು ಹೇಗೆ ದೂರು ನೀಡಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಿದರು.