Slide
Slide
Slide
previous arrow
next arrow

ಕಾನೂನು ಅರಿವು ಮೂಡಿಸಲು ಕಾರ್ಯಕ್ರಮಗಳ ಆಯೋಜನೆ ಅವಶ್ಯ: ಜ್ಯೋತಿಗೌಡ

300x250 AD

ಶಿರಸಿ: ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯ ನಿಂತಿಲ್ಲ ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಹಿಳಾ ಕಾನೂನುಗಳು ಇದ್ದವು. ಸ್ವಾತಂತ್ರ್ಯ ಬಂದ ನಂತರ ಕಾಲಕಾಲಕ್ಕೆ ಅನೇಕ ಕಾನೂನುಗಳನ್ನು ತರಲಾಯಿತಾದರೂ ಆ ಕುರಿತಾದ ಹೆಚ್ಚಿನ ಅರಿವು ನಮ್ಮ ದೇಶದ ಮಹಿಳೆಯರಲ್ಲಿ ಇಲ್ಲದಿರುವುದು ಕಂಡುಬರುತ್ತದೆ. ಈ ಕುರಿತಾಗಿ ಅರಿವು ಮೂಡಿಸಲು ಕಾರ್ಯಕ್ರಮಗಳು ಆಯೋಜನೆಗೊಳ್ಳಬೇಕು ಎಂದು ನ್ಯಾಯವಾದಿ ಜ್ಯೋತಿಗೌಡ ಪಾಟೀಲ್ ಹೇಳಿದರು.

ಅವರು ಎಂ ಇ ಎಸ್ ನ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಭೂಮಿಕಾ ವಿಭಾಗ ಐಕ್ಯೂ ಏಸಿ ಅಡಿಯಲ್ಲಿ ಆಯೋಜಿಸಿದ್ದ ಮಹಿಳಾ ಕಾನೂನು ಸುಧಾರಣೆ ಮತ್ತು ಲಿಂಗ ಸಮಾನತೆ ಎನ್ನುವ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

 12ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾನತೆಯ ಕುರಿತು ಕ್ರಾಂತಿಕಾರಿ ಪ್ರಯೋಗವನ್ನು ಮಾಡಿದರು. ಸಮಾಜದಲ್ಲಿ ಮಹಿಳಾ ಸ್ವಾತಂತ್ರ್ಯದ ಕುರಿತು ತಿಳುವಳಿಕೆ ಮೂಡಿಸುವ ಕಾರ್ಯವನ್ನು ಮಾಡಿದರು. ಶೋಷಣೆಯನ್ನು ದೂರಿಕರಿಸುವ ಪ್ರಯತ್ನ ಅವರದಾಗಿತ್ತು. ಹಾಗಾಗಿ ಶರಣ ಸಾಹಿತ್ಯ ಇಂದು ಕೂಡ ಪ್ರಸ್ತುತವಾಗಿದೆ.

             ಮಹಿಳಾ ದೌರ್ಜನ್ಯ ಇಂದು ನಿನ್ನೇಯದಲ್ಲ ಹಿಂದಿನಿಂದಲೂ ಇರುವಂತದ್ದೇ. ಇಂದು ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ಕೆಲವು ಪ್ರಕರಣಗಳು ಬೇಗನೆ ಬೆಳಕಿಗೆ ಬರುತ್ತಿದೆಯಾದರೂ, ಇಂದು ಕೂಡ ಎಷ್ಟೋ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ ಅದಕ್ಕೆ  ನಮ್ಮ ಸಾಮಾಜಿಕ ವ್ಯವಸ್ಥೆ, ಮರ್ಯಾದೆಗೆ ಅಂಜುವದು, ಕಾನೂನಿನ ಕುರಿತಾಗಿ ಅರಿವಿಲ್ಲದಿರುವುದು, ಮಹಿಳೆಯರ ಬೆಂಬಲಕ್ಕೆ ನಿಲ್ಲದಿರುವುದು ಇವೆಲ್ಲಾ ಕಾರಣವಾಗಿವೆ. ಮಹಿಳೆಯರಿಗಾಗಿ ಕೌಟುಂಬಿಕ ನ್ಯಾಯಾಲಯ ಸ್ಥಾಪಿಸಲಾಯಿತು. ಕೌಟುಂಬಿಕ ದೌರ್ಜನ್ಯ ಕಾನೂನುಗಳು ಬಂದವು, ಹಾಗೆಯೇ ಉಚಿತ ಕಾನೂನು ಸೇವಾ ಪ್ರಾಧಿಕಾರವು ಅವರ ಸಹಾಯಕ್ಕಿದೆ ಇದೆಲ್ಲದರ ಉಪಯೋಗವನ್ನು ಪಡೆದುಕೊಳ್ಳಬೇಕು.ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿದರೂ ಬೆಳೆಯುತ್ತಾ ಹೆಣ್ಣು ಗಂಡು ಎಂಬ ಭೇದಭಾವದ ಪರಿಸರವನ್ನು ನಾವು ಸೃಷ್ಟಿಸುತ್ತಿದ್ದೇವೆ. ಗಂಡು  ಹೆಣ್ಣನ್ನು ಗೌರವಿಸುವ ಪರಿಸರವನ್ನು ನಾವು  ಬೆಳೆಸುತ್ತಿಲ್ಲ ಇಲ್ಲಿ ಪೋಷಕರ ಜವಾಬ್ದಾರಿಯೂ ಇದೆ. ಕಠಿಣ ಕಾನೂನುಗಳು ಬಂದರೂ ಕೂಡ ದೌರ್ಜನ್ಯ ಪ್ರಕರಣಗಳು ನಿಲ್ಲುತ್ತಿಲ್ಲ ಇಂತಹ ಸಂದರ್ಭದಲ್ಲಿ ತ್ವರಿತವಾಗಿ ಶಿಕ್ಷೆ ಆಗುವ ಹಾಗೆ ಆಗಬೇಕು ಎಂದು ಅಭಿಪ್ರಾಯಪಟ್ಟರು.

300x250 AD

    ಐಕ್ಯೂ ಎಸಿ ಸಂಚಾಲಕರಾದ ಡಾ. ಎಸ್ ಎಸ್ ಭಟ್ ಮಾತನಾಡಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಭಿನ್ನವಾದ ವ್ಯವಸ್ಥೆಯಾಗಿದ್ದು ಬಹುಶಾಸ್ತ್ರೀಯ ವಿಷಯವನ್ನು ಓದುವ ಅವಕಾಶವನ್ನು ನೀಡಿದೆ. ಪಠ್ಯಕ್ರಮದೊಂದಿಗೆ ಸಮಾಜ ನಿರ್ಮಿಸುವ ಕಾರ್ಯವನ್ನು ನಾವು ಮಾಡಬೇಕಿದೆ. ಸಮಾಜಮುಖಿ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಬೇರೆ ಬೇರೆ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡುವ ಕಾರ್ಯ ಆಗಬೇಕಿದೆ. ಲಿಂಗ ಸಮಾನತೆ ಹೆಣ್ಣು ಮಕ್ಕಳಿಗಷ್ಟೇ ಸೀಮಿತವಾದ ವಿಷಯವಲ್ಲ. ಇಲ್ಲಿ ಸಮಾಜದ ಕಣ್ಣು ತೆರೆಸುವ, ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಕಾರ್ಯಪ್ರವೃತ್ತರಾಗಬೇಕಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ. ಟಿ ಎಸ್ ಹಳೆಮನೆ ಅಧ್ಯಕ್ಷತೆಯನ್ನು ವಹಿಸಿದ್ದರು. ಇಂಗ್ಲೀಷ್ ವಿಭಾಗ ಮುಖ್ಯಸ್ಥೆ ತಬಸುಮ್ ತಿಳವಳ್ಳಿ ಸ್ವಾಗತಿಸಿದರು. ಭೂಮಿಕಾ ಸಂಚಾಲಕಿ ಡಾ. ಶೈಲಜಾ ಭಟ್ ವಂದಿಸಿದರು. ಜಿ ಸ್ನೇಹ ನಿರೂಪಿಸಿದರು. ಪ್ರಾಧ್ಯಾಪಕರು ವಿದ್ಯಾರ್ಥಿ ವೃಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Share This
300x250 AD
300x250 AD
300x250 AD
Back to top