ಕಾರವಾರ: ನಿಮ್ಮ ಸುತ್ತಮುತ್ತ ಯಾವುದೇ ವ್ಯಕ್ತಿಗಳು ಖಿನ್ನತೆಯಿಂದ, ಮಾನಸಿಕತೆಯಿಂದ ಬಳಲುತ್ತಿರುವುದು ಕಂಡುಬಂದರೆ ಅಂಥವರಿಗೆ ಧೈರ್ಯ ತುಂಬುವಂತಹ ಕೆಲಸ ಆಗಬೇಕು. ಇದರಿಂದ ಒಂದು ಜೀವ ಉಳಿಸಿದಂತಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ರೇಣುಕಾ ವಿ.ರಾಯ್ಕರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್, ಶಿಕ್ಷಣ, ಕಾರಾಗೃಹ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನದಲ್ಲಿ ಇಷ್ಟೊಂದು ಮುಂದುವರೆದಿದ್ದರು ಇಂದಿನ ದಿನಗಳಲ್ಲಿ ಇಂತಹ ದಿನಾಚರಣೆಗಳ ಅವಶ್ಯಕತೆಯಿದೆ. ಜನಗಳಿಗೆ ಆಧ್ಯಾತ್ಮದ ಅರಿವು ಕಡಿಮೆಯಾಗಿದೆ. ಡ್ರಗ್ಸ್ ಬಳಕೆ, ಲವ್ ಫೇಲ್ಯೂರ್, ಆರ್ಥಿಕ ಪರಿಸ್ಥಿತಿ ಇಂತಹ ಅನೇಕ ಸಣ್ಣ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ತಡೆಯಬೇಕಾದರೆ ಇಂತಹ ಕಾರ್ಯಕ್ರಮಗಳು ಅವಶ್ಯಕ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರದ್ ನಾಯಕ ಮಾತನಾಡಿ, ಇವತ್ತಿನ ದಿನಗಳಲ್ಲಿ ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಅಧಿಕವಾಗಿದೆ ಮೊದಲು ಒಬ್ಬರನ್ನೂಬ್ಬರು ಹೋಲಿಕೆ ಮಾಡಿಕೊಳ್ಳುವುದನ್ನು ಬಿಡಬೇಕು. ಯಾರಿಗಿಂತಲೂ ನಾನು ಕಮ್ಮಿ ಇಲ್ಲ ಎನ್ನುವಂತಹ ಆತ್ಮವಿಶ್ವಾಸ ಆತನಲ್ಲಿ ಮೂಡಬೇಕು ಎಂದರು.
ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ವಿಜಯರಾಜ್ ಮಾತನಾಡಿ, ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇರುತ್ತದೆ ಯಾವುದೇ ಆರೋಗ್ಯ ಸಮಸ್ಯೆಯಾದರೆ ಹೇಗೆ ಆಸ್ಪತ್ರೆಗೆ ಹೋಗುತ್ತೇವೆಯೋ ಹಾಗೆ ಮಾನಸಿಕವಾಗಿ ಸಮಸ್ಯೆಯಾದರೂ ಕೂಡ ಆಸ್ಪತ್ರೆಗೆ ಹೋಗಬೇಕು; ಪರಿಹಾರ ಪಡೆಯಬೇಕು. ಪ್ರತಿಯೊಬ್ಬರು ಕ್ಷಣಿಕ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದನ್ನು ತಡೆಯಬೇಕಾದರೆ ಇಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಮಾಡಬೇಕು. ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ ಮಾತನಾಡಿ, ನಮ್ಮ ಸುತ್ತಲೂ ಇರುವ ಋಣಾತ್ಮಕ ಚಿಂತೆನೆಗಳಿಂದ ದೂರವಿರಬೇಕು. ಯಾರಾದರೂ ಆತ್ಮೀಯರಿಗೆ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ಅದರಿಂದ ಮನಸ್ಸು ಹಗುರವಾಗುತ್ತದೆ. ಪ್ರತಿಯೊಂದಕ್ಕೂ ಪರಿಹಾರ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಥಾನಿಕ ವೈದ್ಯಾಧಿಕಾರಿ ಡಾ.ವೆಂಕಟೇಶ್, ಮಾನಸಿಕ ಕಾರ್ಯಕ್ರಮ ಆರೋಗ್ಯಾಧಿಕಾರಿ ಡಾ.ಶಂಕರ್ ರಾವ್, ಇನ್ನಿತರ ಅಧಿಕಾರಿಗಳು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಜರಿದ್ದರು.