• Slide
    Slide
    Slide
    previous arrow
    next arrow
  • ಯುಜಿಡಿ ಕಾಮಗಾರಿ ವಿರುದ್ಧ ಆಕ್ರೋಶ: ಕೆಲಸ ಸ್ಥಗಿತಗೊಳಿಸುವಂತೆ ಆಗ್ರಹ

    300x250 AD

    ದಾಂಡೇಲಿ: ನಗರದ ಹಳೆದಾಂಡೇಲಿಗೆ ಹೋಗುವ ಮುಖ್ಯರಸ್ತೆಯ ಬದಿಯಲ್ಲಿ ಯುಜಿಡಿ ಪೈಪ್ಲೈನ್ ಕಾಮಗಾರಿಗಾಗಿ ಬೃಹತ್ ಪ್ರಮಾಣದಲ್ಲಿ ರಸ್ತೆ ಅಗೆಯಲಾಗುತ್ತಿರುವುದರಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದ್ದು, ಅದು ಮಳೆಗಾಲದ ಸಂದರ್ಭದಲ್ಲೆ ಕಾಮಗಾರಿ ನಡೆಸುತ್ತಿರುವುದರಿಂದ ಮತ್ತಷ್ಟು ತೊಂದರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಯುಜಿಡಿ ಕಾಮಗಾರಿಯನ್ನು ವಿರೋಧಿಸಿ, ಸ್ಥಳೀಯ ಆಟೋ ಚಾಲಕರು ಯುಜಿಡಿ ಪೈಪ್ಲೈನ್ ಕಾಮಗಾರಿ ನಡೆಯುತ್ತಿರುವ ಸ್ಥಳವಾದ ಹಳೆದಾಂಡೇಲಿಯಲ್ಲಿ ಕಾಮಗಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು.

    ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸದೇ ಏಕಾಏಕಿ ಅದು ತುಂಬಿ ಬರುತ್ತಿರುವ ಮಳೆಯ ಸಂದರ್ಭದಲ್ಲಿ ರಸ್ತೆ ಅಗೆಯುವ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ. ಬಹಳಷ್ಟು ಜನರು ಅಪಘಾತಕ್ಕೀಡಾಗಿದ್ದಾರೆ. ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಯುಜಿಡಿ ಕಾಮಗಾರಿಯಿಂದಾಗಿ ರಸ್ತೆ ಹದಗೆಟ್ಟು ಆಟೋ ಚಾಲಕರು ಸೇರಿದಂತೆ ಬಹುತೇಕ ವಾಹನ ಚಾಲಕರು, ಮಾಲಕರು ತಮ್ಮ ತಮ್ಮ ವಾಹನಗಳ ದುರಸ್ತಿಗೆ ಸಾಕಷ್ಟು ಪ್ರಮಾಣದಲ್ಲಿ ಹಣ ವ್ಯಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಸೂಚನೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ರಸ್ತೆ ಅಗೆಯುವ ಕಾಮಗಾರಿ ನಡೆಸುತ್ತಿರುವುದು ನ್ಯಾಯೋಚಿತವಲ್ಲ. ಬದಲಿ ರಸ್ತೆ ವ್ಯವಸ್ಥೆ ಕಲ್ಪಿಸಬೇಕು ಮತ್ತು ಹದಗೆಟ್ಟಿರುವ ರಸ್ತೆಯನ್ನು ಶೀಘ್ರ ದುರಸ್ತಿ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

    ಸ್ಥಳಕ್ಕಾಗಮಿಸಿದ ನಗರಸಭಾ ಸದಸ್ಯರಾದ ಅನಿಲ್ ನಾಯ್ಕರ್, ಕಾಮಗಾರಿ ಸ್ಥಗಿತಗೊಳಿಸಬೇಕೆಂದು ಸೂಚನೆ ನೀಡಲಾಗಿದ್ದರೂ ಮತ್ತೆ ಕೆಲಸ ಮುಂದುವರಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತಿನ ಚಕಮುಖಿಯು ನಡೆಯಿತು. ಬದಲಿ ರಸ್ತೆ ವ್ಯವಸ್ಥೆ ಕೈಗೊಳ್ಳುವವರೆಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಅನಿಲ್ ನಾಯ್ಕರ್ ಅವರು ಒತ್ತಾಯಿಸಿದರು. ಆಗ ಯುಜಿಡಿ ಗುತ್ತಿಗೆ ಸಂಸ್ಥೆಯ ವ್ಯವಸ್ಥಾಪಕ ಆನಂದ ದೀಕ್ಷಿತ್, ನೀವು ಆಡಳಿತ ಪಕ್ಷದವರಾಗಿದ್ದುಕೊಂಡು ಹೀಗೆ ಮಾಡಿದರೆ ಹೇಗೆ ಎಂದು ಹೇಳಿದಾಗ, ಅನಿಲ್ ನಾಯ್ಕರ್ ಅವರು ಜನರಿಗೆ ತೊಂದರೆಯಾಗುವ ರೀತಿಯಲ್ಲಿ ಯಾವುದೇ ಕೆಲಸಗಳಾದಾಗ ಅದನ್ನು ವಿರೋಧಿಸುತ್ತೇವೆ ಎಂದರು. ಸ್ಥಳೀಯ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ನಂತರ ಹಾಗೂ ಮಳೆ ಮುಗಿದ ಮೇಲೆ ಕಾಮಗಾರಿಯನ್ನು ಆರಂಭಿಸುವಂತೆ ಒತ್ತಾಯಿಸಿದರು.

    300x250 AD

    ಈ ನಡುವೆ ಯುಜಿಡಿ ಕಾಮಗಾರಿಯ ವಿರುದ್ಧ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿ, ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಸಪೂರ ಯರಗಟ್ಟಿ, ಆಟೋ ಚಾಲಕರು, ಸಾರ್ವಜನಿಕರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top