ಭಟ್ಕಳ: ತಾಲೂಕು ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನ ಸಂಘದ ವತಿಯಿಂದ 168ನೇ ಶ್ರೀನಾರಾಯಣಗುರು ಜಯಂತಿಯ ಪ್ರಯುಕ್ತ ತಾಲೂಕಿನ ಸಿದ್ದಾರ್ಥ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳಿಗೆ ನಡೆದ ಭಾಷಣ ಸ್ಪರ್ಧೆಯಲ್ಲಿ ಪಟ್ಟಣದ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಹರ್ಷಿತಾ ಎಂ.ನಾಯ್ಕ ಪ್ರಥಮ ಸ್ಥಾನ ಪಡೆದಿದ್ದಾಳೆ.
ಶಿರಾಲಿಯ ಜನತಾ ವಿದ್ಯಾಲಯದ ರೇನಿಷಾ ರೋಡ್ರಿಗಸ್ ದ್ವಿತೀಯ ಸ್ಥಾನ ಪಡೆದಿದ್ದು, ಸಿದ್ದಾರ್ಥ ಪಿಯು ಕಾಲೇಜಿನ ಪರಮೇಶ್ವರಿ ಎಸ್.ಗೌಡ ತೃತೀಯ, ಮುರುಡೇಶ್ವರದ ಆರ್‌ಎನ್‌ಎಸ್ ಪಿಯು ಕಾಲೇಜಿನ ಸೂರ್ಯ ನಾಯ್ಕ ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ. ಸಾಮಾಜಿಕ ಪರಿವರ್ತನೆಗೆ ಶ್ರೀನಾರಾಯಣ ಗುರುಗಳ ಕೊಡುಗೆ ಎಂಬ ವಿಷಯದಲ್ಲಿ 5 ನಿಮಿಷ ಅವಧಿಯ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯ ಬ್ಯಾಂಕಿನ ನಿವೃತ್ತ ಮುಖ್ಯ ವ್ಯವಸ್ಥಾಪಕ ಎಸ್.ಎಂ.ನಾಯ್ಕ, ಹೆಸ್ಕಾಂ ಇಂಜನೀಯರ್ ಶಿವಾನಂದ ಎನ್., ಬ್ರಹ್ಮಶ್ರೀ ನಾರಾಯಣ ಗುರು ಧರ್ಮಪರಿಪಾಲನ ಸಂಘದ ಅಧ್ಯಕ್ಷ ಮನಮೋಹನ ನಾಯ್ಕ, ಸಿದ್ದಾರ್ಥ ಕಾಲೇಜಿನ ಪ್ರಾಂಶುಪಾಲರಾದ ಅರ್ಚನಾ ಇದ್ದರು. ಸ್ಪರ್ಧೆಯ ನಿರ್ಣಾಯಕರಾಗಿ ಗಂಗಾಧರ ನಾಯ್ಕ, ಶ್ರೀಧರ ಜಂಬರಮಠ ಹಾಗೂ ಪಾಂಡುರಂಗ ನಾಯ್ಕ ಕಾರ್ಯನಿರ್ವಹಿಸಿದರು.