ಮುಂಬೈ: ಭಾರತೀಯ ಕೋಸ್ಟ್ ಗಾರ್ಡ್ ಪಶ್ಚಿಮ ವಲಯದ ನೂತನ ಕಮಾಂಡರ್ ಆಗಿ ಕಾರವಾರ ಮೂಲದ ಮನೋಜ್ ಬಾಡ್ಕರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಮುಂಬೈನಲ್ಲಿ ನಡೆದ ಗೌರವ ವಂದನೆ ಪರೇಡ್ ಕಾರ್ಯಕ್ರಮದಲ್ಲಿ ಇನ್ಸ್ಪೆಕ್ಟರ್ ಜನರಲ್ ಮನೋಜ್ ಬಾಡ್ಕರ್ ಅವರು ಭಾರತೀಯ ಕೋಸ್ಟ್ ಗಾರ್ಡ್ ಪಶ್ಚಿಮ ವಲಯದ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡರು. ಮಹಾರಾಷ್ಟ್ರ, ಗೋವಾ, ಕೇರಳ, ಲಕ್ಷದ್ವೀಪ ದ್ವೀಪ ಮತ್ತು ಕರ್ನಾಟಕ ಪಶ್ಚಿಮ ಪ್ರದೇಶ ವ್ಯಾಪ್ತಿಯಲ್ಲಿ ಬರಲಿದ್ದು, ಈ ವ್ಯಾಪ್ತಿಗೆ ಈಗ ಮನೋಜ್ ಬಾಡ್ಕರ್ ಅವರು ಮುಖ್ಯಸ್ಥರಾಗಿದ್ದಾರೆ.
ಕಾರವಾರ ಮೂಲದ ಸುಸಂಸ್ಕೃತ ಕುಟುಂಬದ ಹಿನ್ನೆಲೆಯ ಮನೋಜ್ ಅವರು ಕಾರವಾರದ ಸೇಂಟ್ ಜೋಸೆಫ್ ಹೈಸ್ಕೂಲ್ ಹಾಗೂ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಅವರು 2006ರಿಂದ 2008ರವರೆಗೆ ಕೋಸ್ಟ್ ಗಾರ್ಡ್ ನ ಕರ್ನಾಟಕ ಮತ್ತು ಗೋವಾ ರಾಜ್ಯದ ಮುಖ್ಯಸ್ಥರಾಗಿದ್ದರು. 2013ರಿಂದ 2018ರವರೆಗೆ ದೆಹಲಿಯ ಕೋಸ್ಟ್ ಗಾರ್ಡ್ ನೇಮಕಾತಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡ ಅವರು, 2018ರಲ್ಲಿ ಇನ್ಸ್ಪೆಕ್ಟರ್ ಜನರಲ್ ಶ್ರೇಣಿಗೆ ಬಡ್ತಿ ಪಡೆದರು. ಅವರ 36 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಹಲವಾರು ಕೋಸ್ಟ್ ಗಾರ್ಡ್ ಹಡಗುಗಳು ಮತ್ತು ನಿಲ್ದಾಣಗಳಿಗೆ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಕಾರವಾರದ ಹೆಮ್ಮೆಯ ಪುತ್ರ ಕೋಸ್ಟ್ ಗಾರ್ಡ್ ಪಶ್ಚಿಮ ವಲಯ ಕಮಾಂಡರ್ ಆಗಿ ಅತ್ಯುನ್ನತ ಸ್ಥಾನಕ್ಕೆ ಪದೋನ್ನತಿ ಹೊಂದಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ. ಕಾರವಾರದಲ್ಲೇ ಆರಂಭಿಕ ಶಿಕ್ಷಣ ಪಡೆದು, ನಮ್ಮ ನೆಲದಲ್ಲೇ ಬೆಳೆದ ಮನೋಜ್ ಬಾಡ್ಕರ್ ಅವರು ಕೋಸ್ಟ್ಗಾರ್ಡ್ ಉನ್ನತ ಸ್ಥಾನಕ್ಕೇರಿದ್ದು, ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.:: ರೂಪಾಲಿ ನಾಯ್ಕ, ಶಾಸಕಿ
ಮನೋಜ್ ಬಾಡ್ಕರ್ ಅವರು ಕೋಸ್ಟ್ ಗಾರ್ಡ್ ಪಶ್ಚಿಮ ವಲಯ ಕಮಾಂಡರ್ ಆಗಿರುವುದು ಸಂತಸದ ಸುದ್ದಿ. ಕಾರವಾರ ಮೂಲದ ಅವರು ಅತ್ಯುನ್ನತ ಹುದ್ದೆಗೆ ಏರಿರುವುದು ಕಾರವಾರಕ್ಕೆ ಹೆಮ್ಮೆಯ ಸಂಗತಿಯಾಗಿದೆ.:: ಆನಂದ್ ಅಸ್ನೋಟಿಕರ್, ಮಾಜಿ ಸಚಿವ
ಕಾರವಾರದ ಮನೋಜ್ ಬಾಡ್ಕರ್ ಅವರು ಕೋಸ್ಟ್ ಗಾರ್ಡ್ ಲ್ಲಿ ಎಡಿಜಿಪಿಯಿಂದ ಕಮಾಂಡರ್ ಹುದ್ದೆಗೆ ಪದೋನ್ನತಿ ಹೊಂದಿದ್ದಾರೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಲಕ್ಷದ್ವೀಪ ವ್ಯಾಪ್ತಿಗೆ ಅವರು ಅಧಿಕಾರಿಯಾಗಿದ್ದಾರೆ. ಕಾರವಾರದಲ್ಲಿಯೇ ವಿದ್ಯಾಭ್ಯಾಸ ಮಾಡಿದ ಮನೋಜ್ ಬಾಡ್ಕರ್ ಜನರನ್ನ ಪ್ರೀತಿಯಿಂದ ನೋಡುವ ಸ್ವಭಾವದವರು. ಜನರೊಟ್ಟಿಗೆ ಉತ್ತಮ ಸಂಬಂಧ ಹೊಂದಿದ್ದು, ಅವರ ಅಧಿಕಾರದ ಅವಧಿಯಲ್ಲಿ ಮೀನುಗಾರ ಸಮುದಾಯದವರಿಗೆ ಹೆಚ್ಚಿನ ಉಪಯೋಗ ಮಾಡಿಕೊಡುವ ವಿಶ್ವಾಸವಿದೆ.
· ಸತೀಶ್ ಸೈಲ್, ಮಾಜಿ ಶಾಸಕ