ಕಾರವಾರ: ಸಾಮಾಜಿಕ ಅಸ್ಪೃಶ್ಯತೆ, ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ನಡೆಯುವ ಮೂಢ ಆಚರಣೆಗಳು ಮತ್ತು ಕಂದಾಚಾರಗಳನ್ನು ಹೋಗಲಾಡಿಸಲು ಮತ್ತು ಸ್ತ್ರೀ ಸ್ವಾತಂತ್ರ್ಯ, ಸಮಾನತೆಗಾಗಿ ಜೀವನಪರ್ಯಂತ ಶ್ರಮಿಸಿದ ದಾರ್ಶನಿಕರೆಂದರೆ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ ಹೇಳಿದರು.
ತಾಲೂಕಾಡಳಿತ, ತಾಲೂಕು ಪಂಚಾಯತಿ ಕಾರವಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ತಾಲೂಕು ಪಂಚಾಯತ ಸಭಾಭವನದಲ್ಲಿ ಜರುಗಿದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ನಾರಾಯಣ ಗುರುಗಳು ಜಾತಿ, ಲಿಂಗ, ಧರ್ಮ ಆಧಾರದ ತಾರತಮ್ಯದ ವಿರುದ್ದ ಜೀವನ ಪರ್ಯಂತ ಹೋರಾಡಿದ್ದಾರೆ. ಸ್ತ್ರೀ ಸಮಾನತೆ, ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಿದ್ದಾರೆ. ಅಂತವರ ಜೀವನ ಚಿತ್ರಣವನ್ನು ನಾವು ತಿಳಿದುಕೊಳ್ಳಬೇಕು. ಮುಂದಿನ ಯುವ ಪೀಳಿಗೆಗೂ ಈ ಕುರಿತು ತಿಳಿಸಬೇಕಾದುದು ನಮ್ಮ ಜವಾಬ್ದಾರಿಯಾಗಿದೆ. ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವುದರ ಜೊತೆಗೆ ಸುಸಂಸ್ಕೃತರನ್ನಾಗಿ ಮಾಡುವುದು ಹಿರಿಯರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಉಪನ್ಯಾಸಕ ಸತೀಶ್ ನಾಯ್ಕ ಮಾತನಾಡಿ, ಜಾತಿ ವ್ಯವಸ್ಥೆ, ಧಾರ್ಮಿಕ ಮೂಢನಂಬಿಕೆ ವಿರುದ್ಧ ಮತ್ತು ಸ್ತ್ರೀ ಸ್ವಾತಂತ್ರ್ಯ, ಗೌರವ, ಸಮಾನತೆಗಾಗಿ ನಾರಾಯಣ ಗುರುಗಳು ಧ್ವನಿ ಎತ್ತಿದ್ದಾರೆ. ಅಸ್ಪೃಶ್ಯತೆಯನ್ನು ವಿರೋಧಿಸಿ ಸಾಮಾಜಿಕ ಹಾಗೂ ಧಾರ್ಮಿಕ ಕಂದಾಚಾರ, ಮೂಢನಂಬಿಕೆ ಆಚರಣೆಗಳನ್ನು ಬದಲಾಯಿಸಲು ಕ್ರಾಂತಿಯನ್ನು ಮಾಡಿದರು. ಒಂದೇ ಮತ, ಒಂದೇ ಜಾತಿ, ಒಂದೇ ದೇವರು ಎಂದು ಹೇಳಿದ ಅವರು ಎಲ್ಲರ ಆತ್ಮದಲ್ಲೂ ಪರಮಾತ್ಮನಿದ್ದಾನೆ ಎಂದು ಸರ್ವಧರ್ಮ ಸಮನ್ವಯತೆಯನ್ನು ಸಾರಿದ್ದಾರೆ ಎಂದು ತಿಳಿಸಿದರು.
ಯೋಗದಲ್ಲಿ ಪತಂಜಲಿ, ಅಹಿಂಸೆಯಲ್ಲಿ ಭಗವಾನ್ ಬುದ್ಧ, ಮಾನವೀಯತೆಯಲ್ಲಿ ಏಸು ಇದ್ದಂತೆ ನಾರಾಯಣ ಗುರುಗಳು ಎಂದು ಅನಿಬೆಸೆಂಟ್ ಹೇಳಿದ ಮಾತಿನಂತೆ ಅವರು ಯೋಗಗುರು ಹಾಗೂ ವೈದ್ಯ ವೃತ್ತಿಯಲ್ಲಿ ನಿರತರಾದಂತವರು. ವಿದ್ಯೆಯಿಂದ ವಿವೇಕಿಗಳಾಗಿ, ಸಂಘಟಿತರಾಗಿ, ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಲು ಗುಡಿಕೈಗಾರಿಕೆ ಸ್ಥಾಪಿಸಿ ತನ್ಮೂಲಕ ಸಾಮಾಜಿಕ ಬದಲಾವಣೆಗೆ ಕಾರಣೀಭೂತರಾಗಿ ಎಂದು ಹೇಳಿದ ಅವರ ವಿಚಾರಧಾರೆಗಳು ಎಂದಿಗೂ ಪ್ರಸ್ತುತವಾಗಿವೆ. ಅಂತಹ ಯೋಗಿಗಳ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಶ್ರಮಿಸೋಣವೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯ್ಕ ವಹಿಸಿದ್ದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ತಾಮ್ಸೆ, ಗ್ರೇಡ್೨ ತಹಶೀಲ್ದಾರ ಶ್ರೀದೇವಿ ಭಟ್, ನಾಮಧಾರಿ ಸಮುದಾಯದ ಮುಖಂಡ ಎನ್.ಜಿ.ನಾಯ್ಕ, ರಾಮಾ ನಾಯ್ಕ, ಸುನೀಲ ಸೋನಿ, ಶಿಕ್ಷಕ ಗಣೇಶ್ ಬಿಷ್ಠಣ್ಣನವರ ಮುಂತಾದವರು ಇದ್ದರು.