Slide
Slide
Slide
previous arrow
next arrow

ಕೆಳವರ್ಗದವರ ಕಲ್ಯಾಣಕ್ಕಾಗಿ ಕ್ರಾಂತಿಯನ್ನ ಶಾಂತಿ ಮೂಲಕ ಯಶಸ್ವಿಗೊಳಿಸಿದ ಸಂತ: ಸಚಿವ ಪೂಜಾರಿ

300x250 AD

ಕುಮಟಾ: ಜಾತಿ ವೈಶಮ್ಯದಿಂದ ನಲುಗಿದ್ದ ಸಮಾಜದಲ್ಲಿ ಸಮಾನತೆಯ ಅರಿವು ಮೂಡಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು, ಕೆಳವರ್ಗದವರ ಕಲ್ಯಾಣಕ್ಕೆ ಕ್ರಾಂತಿಯನ್ನು ಶಾಂತಿ ಮೂಲಕ ಯಶಸ್ವಿಗೊಳಿಸಿದ ಸಂತರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುಮಟಾ ತಾಲೂಕು ಆಡಳಿತದ ಸಂಯುಕ್ತಾಶ್ರಯದಲ್ಲಿ ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಶನಿವಾರ ಆಯೋಜಿಸಲಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಶ್ರಮಗಳನ್ನು ನಿರ್ಮಿಸುವ ಮೂಲಕ ಸಾಮಾಜದಲ್ಲಿ ದೌರ್ಜನ್ಯಕ್ಕೊಳಗಾದ ಕೆಳವರ್ಗದವರನ್ನು ಸಲುಹಿದರು. ಅವರಿಗಾಗಿ ಶಿವ ದೇವಾಲಗಳನ್ನು ನಿರ್ಮಿಸುವ ಜೊತೆಗೆ ಮಹಿಳಾ ಸಮಾನತೆ, ಶಿಕ್ಷಣ ಹಕ್ಕುಗಳು ಕೆಳವರ್ಗದ ಜನರಿಗೂ ಲಭಿಸುವಂತೆ ವ್ಯವಸ್ಥೆ ಮಾಡಿದರು. ಈ ಕ್ರಾಂತಿಕಾರಿ ನಡೆಯ ಪರಿಣಾಮ ದೇಶದಲ್ಲಿ ಕೇರಳ ರಾಜ್ಯ ಶಿಕ್ಷಣದಲ್ಲಿ ಮೊದಲ ಸ್ಥಾನ ಪಡೆದಿದೆ ಎಂದರೆ ಅದಕ್ಕೆ ನಾರಾಯಣ ಗುರುಗಳ ಸಮಾಜ ಸುಧಾರಣೆ ಕಾರಣ. ಹಾಗಾಗಿ ಮಹಾತ್ಮ ಗಾಂಧಿಜೀ ಅವರು ನಾರಾಯಣ ಗುರುಗಳನ್ನು ಆಧುನಿಕ ಬ್ರಹ್ಮ ಎಂದು ಸಂಬೋಧಿಸಿದ್ದಾರೆ ಎಂದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕ ಎಂ.ಜಿ.ನಾಯ್ಕ, ಕೇರಳದಲ್ಲಿ ಹುಟ್ಟಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಚಿಕ್ಕಂದಿನಿಂದಲೇ ವೇದಗಳ, ವಿವಿಧ ಧರ್ಮ ಗ್ರಂಥಗಳ ಅಧ್ಯಯನ ಮಾಡಿದ್ದರು. ತಮ್ಮ 22ನೇ ವಯಸ್ಸಿನಲ್ಲೆ ಸರ್ವಸ್ವವನ್ನು ತ್ಯಾಗ ಮಾಡಿ, ಸಂತರಾದರು. 8 ವರ್ಷಗಳ ಕಠಿಣ ತಪಸ್ಸಿನ ಪರಿಣಾಮ ಪಡೆದ ಅಗಾಧ ಜ್ಞಾನ ಭಂಡಾರವನ್ನು ಸಮಾಜ ಕಲ್ಯಾಣಕ್ಕೆ ಬಳಸಿದರು. ಕಾಲ್ನಡಿಗೆಯಲ್ಲಿಯೇ ಸಂಚಾರ ನಡೆಸಿ, ಪ್ರವಚನ ನಡೆಸುವ ಮೂಲಕ ಹಿಂದುಳಿದವರಲ್ಲಿ ಜಾಗೃತಿ ಮೂಡಿಸಿದರು. ಶೂದ್ರರಿಗಾಗಿ 60 ದೇವಸ್ಥಾನಗಳನ್ನು ನಿರ್ಮಿಸುವ ಮೂಲಕ ಭಕ್ತಿಯ ಸಂದೇಶ ಸಾರಿದರು. ಶಿಕ್ಷಣಕ್ಕೂ ಹೆಚ್ಚಿನ ಪ್ರಾದಾನ್ಯತೆ ನೀಡುವ ಮೂಲಕ ಶಿಕ್ಷಣದಿಂದ ಸ್ವಾತಂತ್ರ್ಯ, ಬಲ ಎಂಬುದನ್ನು ನಿರೂಪಿಸಿದ ಸಂತರ ಆದರ್ಶ ವಿಚಾರಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದರು.
ನಾಮಧಾರಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಎಲ್.ನಾಯ್ಕ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಯಾವುದೇ ಒಂದು ಸಮಾಜಕ್ಕೆ ಸೀಮಿತರಾದ ಸಂತರಲ್ಲ. ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಎಲ್ಲ ವರ್ಗದವರು ಪೂಜಿಸುವ ಗುರುಗಳಾಗಿದ್ದಾರೆ. ಸಮಾಜದ ಉನ್ನತಿಗಾಗಿ ಶ್ರಮಿಸಿದ ಮಹಾನ್ ಸಂತರಾದ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾರ್ಥಕ ಜೀವನ ನಮ್ಮದಾಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ, ನಾರಾಯಣ ಗುರುಗಳು ಎಲ್ಲ ಸಮಾಜಗಳಿಗೂ ವಂದನೀಯ. ಅವರ ಕ್ರಾಂತಿಕಾರಿ ನಡೆಗಳಿಂದಲೇ ಈ ಸಮಾಜದಲ್ಲಿದ್ದ ಕಲ್ಮಶಗಳನ್ನು ತೊಡೆದುಹಾಕಲಾಗಿದೆ. ಭಟ್ಕಳದಲ್ಲಿ ಗುರುಗಳ ಹೆಸರಿನಲ್ಲಿ ನಿರ್ಮಾಣವಾದ ವಸತಿ ಶಾಲೆಯನ್ನು ನನ್ನ ಕ್ಷೇತ್ರವಾದ ಕುಮಟಾಕ್ಕೂ ಮಂಜೂರಿ ಮಾಡಿಸಿಕೊಡುವ ಮೂಲಕ ನಮ್ಮ ಭಾಗದ ಹಿಂದುಳಿದ ವರ್ಗಗಳ ಮಕ್ಕಳಿಗೆ ಆಸರೆ ಒದಗಿಸಿಕೊಡಲು ಅವಕಾಶ ಮಾಡಿಕೊಡಬೇಕು ಎಂದು ಸಚಿವರನ್ನು ವಿನಂತಿಸಿದ ಶಾಸಕರು, ಹಿಂದುಳಿದವರ ಕಲ್ಯಾಣಕ್ಕಾಗಿ ನಾನು ಕೂಡ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಮ್ಮ ಸರ್ಕಾರದ ಮೂಲಕ ಮಾಡಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ನಿಮಿತ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಕತಗಾಲ್‌ನ ಎಸ್‌ಕೆಪಿ ಪ್ರೌಢಶಾಲೆಯ ನಿರಂಜನಕುಮಾರ ಪ್ರಥಮ, ಸಿವಿಎಸ್‌ಕೆಯ ಸೃಜನಾ ನಾಯ್ಕ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಅಂಬೇಡ್ಕರ್ ವಸತಿ ಶಾಲೆಯ ರೇಷ್ಮಾ ಗೌಡ ಪಡೆದರು. ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜಿನ ನಿವೇದಿತಾ ಪಟಗಾರ ಪ್ರಥಮ, ಪವಿತ್ರಾ ಪಟಗಾರ ಮತ್ತು ಸರಸ್ವತಿ ಪಿಯು ಕಾಲೇಜಿನ ಆರ್ಶಿಯಾ ಶೇಖ್ ದ್ವಿತೀಯ ಸ್ಥಾನ ಪಡೆದರೆ, ತೃತೀಯ ಸ್ಥಾನವನ್ನು ಪವಿತ್ರಾ ಎಂ ಪಟಗಾರ ಪಡೆದರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ವಿತರಿಸಿ, ಪುರಸ್ಕರಿಸಲಾಯಿತು.
ತಹಶೀಲ್ದಾರ್ ವಿವೇಕ ಶೇಣ್ವಿ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ನಾಯ್ಕ, ಯೋಗೇಶ ಕೋಡ್ಕಣಿ ಮತ್ತು ಗಿರೀಶ ನಾಯ್ಕ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್.ಭಟ್ ವಂದಿಸಿದರು. ಉಪನ್ಯಾಸಕ ಪ್ರಮೋದ ನಾಯ್ಕ, ತಹಶೀಲ್ದಾರ್ ಕಚೇರಿಯ ತಾರಾ ನಾಯ್ಕ ಹಾಗೂ ಇತರರು ಕಾರ್ಯಕ್ರಮಕ್ಕೆ ಸಹಕರಿಸಿದರು. ವೇದಿಕೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಉಪವಿಭಾಗಾಧಿಕಾರಿ ರಾಘವೇಂದ್ರ ಬಿ.ಜಗಲದಾರ್, ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ, ಕುಮಟಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಕೋಡ್ಕಣಿ, ಕಸಾಪ ಅಧ್ಯಕ್ಷ ಸುಬ್ಬಯ್ಯ ನಾಯ್ಕ, ಐಕ ಸಂಸ್ಥೆ ಅಧ್ಯಕ್ಷ ಎಂ.ಜಿ.ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನರೇಂದ್ರ ನಾಯಕ ಇದ್ದರು.

300x250 AD
Share This
300x250 AD
300x250 AD
300x250 AD
Back to top