ಅಂಕೋಲಾ: ನಾರಾಯಣ ಗುರುಗಳು ಹಿಂದುಳಿದ ವರ್ಗದ ಪರ ಧ್ವನಿಯೆತ್ತಿ ಸಮಾನತೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು. ಅಜ್ಞಾನದಲ್ಲಿದ್ದ ಜನರನ್ನು ಸುಜ್ಞಾನದತ್ತ, ಎಲ್ಲರೂ ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಬೇಕು ಎಂಬ ಮಹದಾಸೆಯಿಂದ ಶಿಕ್ಷಣ ದೊರಕಿಸಿ ಕೊಡುವಲ್ಲಿ ಕಾರಣೀಕರ್ತರಾದ ನಾರಾಯಣಗುರುಗಳು ಎಂದಿಗೂ ಆದರ್ಶಪ್ರಾಯರಾಗಿದ್ದಾರೆ ಎಂದು ವೈದ್ಯ ಡಾ.ಕರುಣಾಕರ ಎಂ.ನಾಯ್ಕ ಹೇಳಿದರು.
ಪಟ್ಟಣದ ಕಾಕರಮಠದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಶ್ರೀ ನಾರಾಯಣಗುರು ವೇದಿಕೆ ವತಿಯಿಂದ ಹಮ್ಮಿಕೊಂಡ ನಾರಾಯಣ ಗುರುಗಳ 168ನೇ ಜಯಂತ್ಯುತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ತಾಲೂಕು ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಆಚಾ ಮಾತನಾಡಿ, ಶ್ರೀ ನಾರಾಯಣಗುರುಗಳು ಕೇರಳದಲ್ಲಿ ಮಾಡಿದ ಅದ್ಭುತ ಪವಾಡಗಳು ಎಂದೂ ಮರೆಯುವಂತಿಲ್ಲ. ಧ್ವನಿಯಿಲ್ಲದ, ಶೋಷಿತರ ಪರವಾಗಿ ದೇವಸ್ಥಾನ, ಶಾಲೆ ನಿರ್ಮಿಸಿದರು. ಧಾರ್ಮಿಕವಾಗಿಯೂ ಜನರಲ್ಲಿ ಮನೋಸ್ಥೈರ್ಯ ತುಂಬಿದವರು ಎಂದರು.
ಶಿರಸಿ ಅರಣ್ಯ ಇಲಾಖೆಯ ವ್ಯವಸ್ಥಾಪಕ ವಿನಾಯಕ ನಾಯ್ಕ ಮಾತನಾಡಿ, ನಾರಾಯಣ ಗುರುಗಳ ಜಯಂತಿ ನಾಡಿನೆಲ್ಲೆಡೆ ಸರಕಾರಿ ಕಾರ್ಯಕ್ರಮವಾಗಿ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಇಂತಹ ಮಹಾನ್ ಪುರುಷನ ಹೆಸರಿನಲ್ಲಿ ಕಾರ್ಯಕ್ರಮ ಮಾಡಿ, ವಿವಿಧ ಸಂಘಟನೆಯ ಪ್ರಮುಖರುಗಳಿಗೆ ಸನ್ಮಾನ ಮಾಡಿರುವುದು ಶ್ಲಾಘನೀಯವಾದದ್ದು ಎಂದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ, ಸದಸ್ಯರಾದ ಜಯಾ ಬಾಲಕೃಷ್ಣ ನಾಯ್ಕ ಮಾತನಾಡಿದರು. ಸದಸ್ಯ ತಾರಾ ನಾಯ್ಕ ಉಪಸ್ಥಿತರಿದ್ದರು. ನಾರಾಯಣಗುರು ವೇದಿಕೆ ಅಧ್ಯಕ್ಷ ನಾಗರಾಜ ಎಚ್.ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಕಾರ್ಯಾಲಯ ಸಹಾಯಕ ಡಿ.ಜಿ. ನಾಯ್ಕ ಪ್ರಾರ್ಥಿಸಿದರು. ಕಾರ್ಯದರ್ಶಿ ಮಂಜುನಾಥ ಕೆ.ನಾಯ್ಕ ಸ್ವಾಗತಿಸಿದರು. ವಕೀಲ ಉಮೇಶ ನಾಯ್ಕ ನಿರ್ವಹಿಸಿದರು. ರಾಜೇಶ ನಾಯ್ಕ ವಂದಿಸಿದರು.
ವಿವಿಧ ಸಂಘಟನೆಯ ಪ್ರಮುಖರಾದ ನಾಗೇಶ ಎಸ್.ನಾಯ್ಕ, ಮೋಹನ ಎಚ್.ನಾಯ್ಕ, ವೆಂಕಪ್ಪ ಪಿ.ನಾಯ್ಕ, ಉದಯ ಆರ್.ನಾಯ್ಕ, ರಮೇಶ ಎಸ್.ನಾಯ್ಕ, ಏಕನಾಥ ಎಸ್.ನಾಯ್ಕ, ಗೋವಿಂದ್ರಾಯ ಕೆ.ನಾಯ್ಕ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಎಸ್.ನಾಯ್ಕ, ಸಂಜಯ ನಾಯ್ಕ, ಶಿವಾನಂದ ನಾಯ್ಕ, ವಿ.ಸಿ.ನಾಯ್ಕ, ಧರ್ಮ ಈಡಿಗ ಅವರನ್ನು ಸನ್ಮಾನಿಸಿ ನಾರಾಯಣ ಗುರುಗಳ ಭಾವಚಿತ್ರ ನೀಡಿದರು.