ಹೊನ್ನಾವರ: ತಾಲೂಕಿನ ಮಂಕಿ ಪಟ್ಟಣ ಪಂಚಾಯತದಲ್ಲಿ ಕಳೆದ ಕೆಲವು ದಿನಗಳಿಂದ ಇಬ್ಬರು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇದು ಸಾರ್ವಜನಿಕರ ಗಮನಕ್ಕೆ ಬಂದಿಲ್ಲ ಮತ್ತು ಈ ಸಿಬ್ಬಂದಿಗಳನ್ನು ಯಾವುದೇ ಪುರಾವೆ ಇಲ್ಲದೇ ನೇಮಿಸಿಕೊಳ್ಳಲಾಗಿದೆ. ಇವರು ಅಪರಿಚಿತರಾಗಿದ್ದು, ಪಟ್ಟಣ ಪಂಚಾಯತದ ಕೆಲವು ಮಹತ್ವದ ದಾಖಲೆಗಳನ್ನು ನಾಶ ಮಾಡುವ ಸಂಭವವಿರುತ್ತದೆ ಎಂದು ಸಾರ್ವಜನಿಕರು ಅಂಚೆಯ ಮೂಲಕ ತಹಶೀಲ್ದಾರರಿಗೆ ದೂರು ನೀಡಿದ್ದಾರೆ.
ಸಾರ್ವಜನಿಕರು ಪಟ್ಟಣ ಪಂಚಾಯತಕ್ಕೆ ವಿಚಾರಿಸಲು ಹೋದರೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಕಚೇರಿಯಲ್ಲಿ ಲಭ್ಯವಿಲ್ಲ. ಸಿಬ್ಬಂದಿಯ ನೇಮಕಾತಿಯ ಬಗ್ಗೆ ಮುಖ್ಯಾಧಿಕಾರಿಗಳು, ಯಾವುದೇ ನೇಮಕಾತಿ ನಡೆದಿಲ್ಲ. ಮಹಿಳಾ ಸಿಬ್ಬಂದಿಯೋರ್ವರು ರಜೆಯಲ್ಲಿದ್ದು, ಅವರ ಬಾಕಿ ಕೆಲಸ ಮುಗಿಸಬೇಕಾಗಿರುವುದರಿಂದ ಅವರೇ ಮತ್ತೊಬ್ಬರನ್ನು ನಿಯೋಜಿಸಿ ಕೆಲಸ ಮಾಡಿಸುತ್ತಿದ್ದಾರೆ. ಹೊಸದಾಗಿ ನೇಮಕಾತಿ ಆದೇಶವನ್ನು ಕೂಡ ಹೊರಡಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಈ ನೇಮಕಾತಿ ಕಾನೂನಿಗೆ ವಿರುದ್ಧವಾಗಿದ್ದು, ಅಧಿಕಾರಿಯ ವಿರುದ್ಧ ಸೂಕ್ತ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು ಮತ್ತು ಈಗಾಗಲೇ ಅಸಮರ್ಪಕ ನೇಮಕಾತಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಈ ಕೂಡಲೇ ತೆಗೆದು ಹಾಕಬೇಕಾಗಿ ಪತ್ರದಲ್ಲಿ ದೂರಿದ್ದಾರೆ.