ಯಲ್ಲಾಪುರ: ಪಟ್ಟಣದ ಗಾಂಧಿ ಕುಟೀರದಲ್ಲಿ ನಡೆದ 7 ನೇ ವರ್ಷದ ಶ್ರಾವಣ ಯಕ್ಷ ಸಂಭ್ರಮ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಪ್ರಸಿದ್ಧ ಕಲಾವಿದರಿಂದ ಅತಿಕಾಯ ಮೋಕ್ಷ, ಗಿರಿಜಾ ಕಲ್ಯಾಣ ಹಾಗೂ ವೀರವರ್ಮ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು.
35 ಕ್ಕೂ ಹೆಚ್ಚು ಕಲಾವಿದರು ಕಾರ್ಯಕ್ರಮದಲ್ಲಿ ಕಲಾ ಪ್ರದರ್ಶನ ನೀಡಿದರು. ಅತಿಕಾಯ ಮೋಕ್ಷದಲ್ಲಿ ವಿದ್ವಾನ್ ಗಣಪತಿ ಭಟ್ಟ, ರಾಘವೇಂದ್ರ ಆಚಾರಿ ಜನ್ಸಾಲೆ ಅವರ ದ್ವಂದ್ವ ಭಾಗವತಿಕೆ, ಕೃಷ್ಣಯಾಜಿ ಬಳ್ಕೂರು, ತೋಟಿಮನೆ ಗಣಪತಿ ಹೆಗಡೆ ಇತರ ಕಲಾವಿದರ ಪಾತ್ರ ನಿರ್ವಹಣೆ ಗಮನ ಸೆಳೆಯಿತು.
ತೆಂಕು-ಬಡಗಿನ ಕಲಾವಿದರ ಕೂಡುವಿಕೆಯಲ್ಲಿ ಗಿರಿಜಾ ಕಲ್ಯಾಣದಲ್ಲಿ ಶಂಕರ ಭಟ್ಟ ಬ್ರಹ್ಮೂರು ಹಾಗೂ ದಿನೇಶ ಭಟ್ಟ ಯಲ್ಲಾಪುರ ಅವರ ದ್ವಂದ್ವ ಭಾಗವತಿಕೆ, ವಿನಯ ಬೇರೊಳ್ಳಿ, ನಾಗರಾಜ ಕುಂಕಿಪಾಲ, ದಿನಕರ ಗೋಖಲೆ, ಹರಿನಾರಾಯಣ ಭಟ್ಟ ಎಡನೀರು ಸೇರಿದಂತೆ ತೆಂಕು ಬಡಗಿನ ಮುಮ್ಮೇಳದ ಕಲಾವಿದರ ಅಭಿನಯ ರಂಜಿಸಿತು.
ವೀರವರ್ಮ ಕಾಳಗದಲ್ಲಿ ಹಿಲ್ಲೂರು ರಾಮಕೃಷ್ಣ ಹೆಗಡೆ, ಪ್ರಸನ್ನ ಭಟ್ಟ ಬಾಳ್ಕಲ್ ಅವರ ದ್ವಂದ್ವ ಭಾಗವತಿಕೆ, ನೀಲ್ಕೋಡ ಶಂಕರ ಹೆಗಡೆ, ಉದಯ ಕಡಬಾಳ, ಕಾರ್ತಿಕ ಚಿಟ್ಟಾಣಿ, ಭಾಸ್ಕರ ಗಾಂವ್ಕಾರ, ಸದಾಶಿವ ಮಲವಳ್ಳಿ ಇತರರು ಪಾತ್ರ ನಿರ್ವಹಿಸಿದರು.
ಇದೇ ವೇಳೆ ಸಂಘಟನೆಯ ವತಿಯಿಂದ ಕಲಾ ಸಂಘಟಕ, ಸಾಂಸ್ಕೃತಿಕ ರಾಯಭಾರಿ ಪ್ರಮೋದ ಹೆಗಡೆ ಅವರನ್ನು ಗೌರವಿಸಲಾಯಿತು. ಸುಬ್ಬಣ್ಣ ಕಂಚಗಲ್, ರಾಘವೇಂದ್ರ ಭಟ್ಟ ಬೆಳ್ಸೂರು ನೇತೃತ್ವದಲ್ಲಿ ನಡೆದ ಶ್ರಾವಣ ಸಂಭ್ರಮ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿತು.