ಅಂಕೋಲಾ: ನಾವೆಲ್ಲರೂ ನಮ್ಮ ನಮ್ಮ ಊರುಗಳನ್ನು ಪ್ಲ್ಯಾಸ್ಟಿಕ್ ಮುಕ್ತ ಊರುಗಳನ್ನಾಗಿ ಪರಿವರ್ತಿಸುವ ಪ್ರತಿಜ್ಞೆ ಮಾಡಬೇಕು. ಗಣೇಶೋತ್ಸವದ ಪ್ರಯುಕ್ತ ಗುಂಡಬಾಳಾ ಗ್ರಾಮಸ್ಥರು ವಿಶೇಷವಾಗಿ ಇಂತಹ ಕಾರ್ಯಕ್ರಮ ಇಟ್ಟುಕೊಂಡಿರುವುದು ಇತರರಿಗೆ ಮಾದರಿ ಎಂದು ವಕೀಲ ನಾಗರಾಜ ನಾಯಕ ಹೇಳಿದರು.
ತಾಲ್ಲೂಕಿನ ಗುಂಡಬಾಳಾ ಗ್ರಾಮದಲ್ಲಿ 25ನೇ ವರ್ಷದ ಗಣೇಶೋತ್ಸವ ಬೆಳ್ಳಿ ಮಹೋತ್ಸವದ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು, ಪ್ಲ್ಯಾಸ್ಟಿಕ್‌ನಿಂದ ಪರಿಸರಕ್ಕೆ ಆಗುವ ಅಪಾಯಗಳನ್ನು ತಿಳಿಸಿದರು.
ಹಿಲ್ಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ಬಾಬು ಸುಂಕೇರಿ ಮಾತನಾಡಿ, ನಮ್ಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಮನೆ ಮನೆಗೆ ಹೋಗಿ ಕಸ ಸಂಗ್ರಹಿಸುವ ಮತ್ತು ಅದನ್ನು ವಿಲೇವಾರಿ ವ್ಯವಸ್ಥೆ ಮಾಡಲಾಗಿದೆ. ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳನ್ನು ಪ್ಲ್ಯಾಸ್ಟಿಕ್ ಮುಕ್ತ ಮಾಡುವ ಪ್ರಯತ್ನ ಮಾಡಲಾಗುವುದು ಎಂದರು.
ಸಂಘಟಕ ರಮಾನಂದ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಳ್ಳಿ ಮಹೋತ್ಸವದ ಪ್ರಯುಕ್ತ ನಾವು ಯಕ್ಷಗಾನ, ಅನ್ನದಾನ, ಗುಮ್ಮಟೆ ವಾದ್ಯ ನುಡಿಸುವ ಕಾರ್ಯಕ್ರಮಗಳ ಜೊತೆಗೆ ನಮ್ಮೂರಿನ ಜನತೆಯಲ್ಲಿ ಪರಿಸರ ಮತ್ತು ಸ್ವಚ್ಚತೆಯ ಅರಿವು ಮೂಡಿಸಲು ನಿನ್ನೆ ವನಮಹೋತ್ಸವ ಹಮ್ಮಿಕೊಂಡಿದ್ದೆವು, ಇವತ್ತು ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು. ನಮ್ಮೂರನ್ನೂ ಪ್ಲಾಸ್ಟಿಕ್ ಮುಕ್ತವಾಗಿಸಲು ನಾವು ಖಂಡಿತವಾಗಿ ಪ್ರಯತ್ನ ಮಾಡುತ್ತೇವೆ ಎಂದರು.
ಹಿಲ್ಲೂರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ನಾಗರತ್ನ ಗೌಡ, ಗ್ರಾಮ ಪಂಚಾಯತಿ ಸದಸ್ಯರಾದ ಮಾಲತಿ ಗೌಡ, ಉದ್ದಿಮೆದಾರರಾದ ಪ್ರವೀಣ್ ನಾಯಕ, ಮುಕುಂದ ನಾಯ್ಕ, ಶಿಕ್ಷಕಿ ಶೋಭಾ ನಾಯಕ, ಶಿಕ್ಷಕ ರಾಮು ನಾಯಕ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಗುಂಡಬಾಳಾದ ಅಧ್ಯಕ್ಷ ಅನಿಲ್ ನಾಯ್ಕ, ಜಯಂತ್ ಗೌಡ, ಮಾಸ್ತಿ ಗೌಡ ಸೇರಿದಂತೆ ಊರ ನಾಗರಿಕರು ಉಪಸ್ಥಿತರಿದ್ದರು.