ಶಿರಸಿ: ಮೇ 2022ನೇ ಮಾಹೆಯ ಸರ್ಕಾರದಿಂದ ಹಾಲು ಉತ್ಪಾದಕರಿಗೆ ನೀಡಲಾಗುವ ರೂ. 5 ಪ್ರೋತ್ಸಾಹ ಧನವು ಆಧಾರ ಜೋಡಣೆಯಾದ ಹಾಲು ಉತ್ಪಾದಕ ರೈತರ ಬ್ಯಾಂಕ್ ಖಾತೆಗೆ ಸೆ.1 ಗುರುವಾರದಂದು ಜಮಾ ಆಗಿದೆ ಎಂದು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರು ಹಾಗೂ ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಜುಲೈ-2022 ನೇ ಮಾಹೆಯ ಪ್ರೋತ್ಸಾಹ ಧನದ ಮಾಹಿತಿಯನ್ನು ನಮ್ಮಿಂದ ಕ್ಷೀರ ಸಿರಿ ತಂತ್ರಾಶದಲ್ಲಿ ಈಗಾಗಲೇ ಅಳವಡಿಸಲಾಗಿದ್ದು, ಜಿಲ್ಲೆಯಾದ್ಯಂತ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಅಗಸ್ಟ್-2022 ನೇ ಮಾಹೆಯ ಪ್ರೋತ್ಸಾಹ ಧನದ ಮಾಹಿತಿಯನ್ನು ಪಡೆದು ಕ್ಷೀರ ಸಿರಿ ತಂತ್ರಾಶದಲ್ಲಿ ಅಳವಡಿಸಲಾಗುತ್ತಿದೆ ಎಂದರು. ಜೂನ್ ಹಾಗೂ ಜುಲೈ ತಿಂಗಳುಗಳ ರೂ. 5 ಪ್ರೋತ್ಸಾಹ ಧನವು ಕೂಡ ಶೀಘ್ರದಲ್ಲೇ ಹಾಲು ಉತ್ಪಾದಕರ ರೈತರ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಜಮಾ ಆಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು. ಹಾಗೂ ಪ್ರೋತ್ಸಾಹ ಧನ ಜಮಾ ಆಗದ ರೈತರು ಆಯಾ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಿದರು.