ಯಲ್ಲಾಪುರ: ತಾಲೂಕಿನ ಕಂಚನಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಸುಧಾಕರ.ಜಿ.ನಾಯಕ ಅವರಿಗೆ ಪ್ರಸಕ್ತ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕ್ರಿಯಾಶೀಲ, ಆದರ್ಶ ಶಿಕ್ಷಕರಾಗಿ, ಉತ್ತಮ ಸಂಘಟಕರಾಗಿ ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವ ಸುಧಾಕರ ನಾಯಕ, ಅವರು ತಾಲೂಕಿನ ಜೋಗಿಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಆರಂಭಿಸಿದರು. 30 ವರ್ಷಗಳ ಸೇವಾ ಅವಧಿಯಲ್ಲಿ ಹಿತ್ಲಕಾರಗದ್ದೆ, ಕನ್ನಡಗಲ್, ಕೆ.ಜಿ.ಎಸ್ ಶಾಲೆ, ನಂದೊಳ್ಳಿ, ಸೂಳಗಾರ, ಆನಗೋಡ ಶಾಲೆಗಳಲ್ಲಿ ಶಿಕ್ಷಕರಾಗಿ, ಆನಗೋಡ, ನಂದೊಳ್ಳಿ ಸಿ.ಆರ್.ಪಿ ಆಗಿ, ಬಿ.ಆರ್.ಸಿ ಕೇಂದ್ರದಲ್ಲಿ ಬಿ.ಆರ್.ಪಿ ಆಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಕಿರವತ್ತಿ ಸಮೀಪದ ಕಂಚನಳ್ಳಿ ಶಾಲೆಯಲ್ಲಿ ಮುಖ್ಯಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದೇಹಳ್ಳಿ, ಆನಗೋಡ, ಕಂಚನಳ್ಳಿ ಶಾಲೆಗಳನ್ನು ಸಮುದಾಯದ ಸಹಕಾರದೊಂದಿಗೆ ಜಿಲ್ಲೆಯಲ್ಲೇ ಆದರ್ಶ ಶಾಲೆಯಾಗಿ ರೂಪಿಸಿದ್ದಾರೆ. ಹಿಂದುಳಿದ ಗೌಳಿ ಸಮುದಾಯದ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಕಂಚನಳ್ಳಿ ಶಾಲೆಗೆ ಬೇರೆ ಬೇರೆ ಸಂಘ-ಸಂಸ್ಥೆಗಳ ಮೂಲಕ ಅಗತ್ಯ ಸೌಕರ್ಯಗಳನ್ನು ಕೊಡಿಸುವಲ್ಲು ಶ್ರಮಿಸಿದ್ದು, ಮಕ್ಕಳ ವಿದ್ಯಾ ಪ್ರಗತಿಗೆ ಕಾರಣಿಕರ್ತರಾಗಿದ್ದಾರೆ. ಕರೊನಾ ಸಂದರ್ಭದಲ್ಲಿ ವಿದ್ಯಾಗಮ ಯೋಜನೆಯಡಿ ಹಳ್ಳಿಯ ಮೂಲೆ ಮೂಲೆ ತಲುಪಿ ಶೈಕ್ಷಣಿಕ ಚಟುವಟಿಕೆ ನಡೆಸಿದ್ದಾರೆ.
ಶಿಕ್ಷಕರ ಕಾರ್ಯಾಗಾರಗಳಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ. ಭಾರತ ಸ್ಕೌಟ್ ಮತ್ತು ಗೈಡ್ಸ್ ನ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ 8 ವಿದ್ಯಾರ್ಥಿಗಳನ್ನು ರಾಷ್ಟ್ರಮಟ್ಟದ ಜಾಂಬೂರಿ ಮಕ್ಕಳ ಮೇಳದಲ್ಲಿ ಭಾಗವಹಿಸಲು ಮಾರ್ಗದರ್ಶನ ನೀಡಿದ್ದಾರೆ. ಬೆಂಗಳೂರಿನಲ್ಲಿ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಭಾಗವಹಿಸಲು ಮಕ್ಕಳಿಗೆ ತರಬೇತಿ ನೀಡಿದ್ದಾರೆ.
ಕಾನೂನು ಸೇವಾ ಸಮಿತಿಯಲ್ಲಿ ಪ್ಯಾರಾಲೀಗಲ್ ವಾಲಂಟಿಯರ್, ರೆಡ್ ಕ್ರಾಸ್ ಸಂಸ್ಥೆಯಲ್ಲಿ ಖಜಾಂಚಿಯಾಗಿ, ತಾಲೂಕು ಕನ್ನಡ ಜಾನಪದ ಪರಿಷತ್ ನ ಅಧ್ಯಕ್ಷರಾಗಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲತೆಯಿಂದ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಕೊಂಡಿದ್ದಾರೆ.