ಭಟ್ಕಳ : ತಾಲೂಕಿನ ಹೆಬಳೆ ಗ್ರಾಪಂ ಹೊನ್ನೆಗದ್ದೆ ವರಕೊಡ್ಲು ಭಾಗದಲ್ಲಿ ಸರಿಸುಮಾರು ಟನ್‌ಗೂ ಅಧಿಕ ತೂಕದ 26 ಅಡಿ ಆಳದ ಬಾವಿಗೆ ಬಿದ್ದು, ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಕೋಣವೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿ ಮೇಲಕ್ಕೆ ತಂದಿರುವ ಘಟನೆ ನಡೆದಿದೆ.
ಬಾವಿಯ ಅಗಲ 6 ಅಡಿ ಅಗಲದಷ್ಟಿದ್ದು, ಜಲವಾಹನದ ಹಗ್ಗ ಹಾಗೂ ಹೋಸ್‌ಗಳ ಸಹಾಯದಿಂದ ಕೋಣವನ್ನು ನೀರಿನಿಂದ ಮೇಲಕ್ಕೆ ಎತ್ತಲಾಯಿತು. ಕೋಣ ಬಾವಿಗೆ ಬಿದ್ದ ಬಗ್ಗೆ ರವಿ ಕೃಷ್ಣಗೊಂಡ ಎಂಬುವವರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದರು. ಕೋಣದ ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ಎಸ್.ರಮೇಶ, ಸಿಬ್ಬಂದಿಗಳಾದ ಮನೋಜ ಬಾಡಕರ, ಶಿವಪ್ರಸಾದ ನಾಯ್ಕ, ಕುಮಾರ ನಾಯ್ಕ, ಶಂಕರ ಲಮಾಣಿ, ಪುರುಷೋತ್ತಮ ನಾಯ್ಕ, ರಾಜೇಶ ನಾಯ್ಕ, ಅರುಣ ನಾಯ್ಕ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.