Slide
Slide
Slide
previous arrow
next arrow

ಕರುಣೆ ಎಂಬುದು ದಿವ್ಯೌಷಧ: ಸಮಯ ಸಂದರ್ಭ ಅರಿತು ಬಳಸಿ

300x250 AD

ಗೋಕರ್ಣ: ಕಾರುಣ್ಯ ಗುಣವಷ್ಟೇ ಅಲ್ಲ; ದೋಷವೂ ಹೌದು. ಕರುಣೆಯೆಂಬ ದಿವ್ಯ ಔಷಧವನ್ನು ಸಮಯ, ಸಂದರ್ಭ ಅರಿತು ಬಳಸಬೇಕು ಎಂದು ಎಂದು ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.
ಅಶೋಕೆಯ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶುಕ್ರವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಕಾಲ ದೇಶಕ್ಕೆ ಅನುಗುಣವಾಗಿ ಯಾವ ಗುಣಗಳನ್ನೂ ವಿವೇಚನೆಯಿಂದ ಬಳಸಬೇಕು. ಉದಾಹರಣೆಗೆ ಹಾಲು ಒಳ್ಳೆಯ ಪದಾರ್ಥವಾದರೂ ಜ್ವರ ಬಂದವನಿಗೆ ಹಾಲು ಕುಡಿಸುವಂತಿಲ್ಲ. ಹೀಗೆಯೇ ಕಾರುಣ್ಯದಂಥ ಸದ್ಗುಣ ಕೂಡಾ ಅಸ್ಥಾನದ ಸಂದರ್ಭದಲ್ಲಿ ಒಳ್ಳೆಯ ಗುಣವಲ್ಲ ಎಂದು ವಿಶ್ಲೇಷಿಸಿದರು.
ಭಗವಂತನಿಗೆ ಸರ್ವತ್ರ ಜೀವಗಳ ಮೇಲೆ ಕಾರುಣ್ಯ ಇದೆ. ಆದರೆ ಭಗವಂತ ಅವತಾರ ಎತ್ತಿ ಬಂದಾಗ ದುಷ್ಟರನ್ನು ಸಂಹಾರ ಮಾಡುತ್ತಾನೆ. ಅದು ಕೂಡಾ ಒಂದು ವಿಧದಲ್ಲಿ ಕಾರುಣ್ಯವೇ. ದುಷ್ಟರ ನಿಗ್ರಹದ ಮೂಲಕ ಪಾಪಕ್ಕೆ ಅಂತ್ಯ ಕಾಣಿಸುವ ಕಾರುಣ್ಯ ಅದು. ಶಸ್ತ್ರಚಿಕಿತ್ಸೆ ಮೂಲಕ ಕ್ಯಾನ್ಸರ್‌ಗಡ್ಡೆಯನ್ನು ತೆಗೆಯುವಂತೆ ದುಷ್ಟರನ್ನು ನಿಗ್ರಹಿಸುತ್ತಾನೆ. ಇದು ಕೂಡಾ ಕರುಣೆಯ ರೂಪವೇ ಎಂದರು.
ದೇವರನ್ನು ಕರುಣಾ ಸಾಗರ, ಗುರುವನ್ನು ಕೃಪಾಮಯಿ ಎಂದು ಕರೆದಿದ್ದಾರೆ. ನಿಷ್ಕರುಣೆ ಎಂದಾಗ ರಾಕ್ಷಸರ ನೆನಪಾಗುತ್ತದೆ. ಪುರಾಣದಲ್ಲಿ ಸ್ಥಾನ ಕಾರುಣ್ಯ, ಅಸ್ಥಾನ ಕಾರುಣ್ಯ ಎಂಬ ಉಲ್ಲೇಖಗಳಿವೆ. ಅಸ್ಥಾನ ಕಾರುಣ್ಯ ಎಂದರೆ ಸಮರ್ಪಕವಲ್ಲದ ಕರುಣೆ. ಒಳ್ಳೆಯದು ಅಥವಾ ಒಳಿತು ಎನ್ನುವುದು ಎಲ್ಲೆಡೆ ಒಂದೇ ಆಗಿರಬೇಕಿಲ್ಲ. ಸಂದರ್ಭ, ಕಾಲಕ್ಕೆ ಅನುಸಾರವಾಗಿ ಗುಣವೂ ದೋಷವಾಗಬಹುದು ಎಂದು ವಿಶ್ಲೇಷಿಸಿದರು.
ಮಹಾಭಾರತ ಯುದ್ಧಘೋಷದ ಸಂದರ್ಭದಲ್ಲಿ ಶಸ್ತ್ರಪ್ರಹಾರ ಇನ್ನೇನು ಆರಂಭವಾಗಬೇಕು ಎನ್ನುವಾಗ ಅರ್ಜುನ, ಕೃಷ್ಣನಿಗೆ ರಥವನ್ನು ನಿಲ್ಲಿಸಲು ಹೇಳುತ್ತಾನೆ. ಆ ಸಂದರ್ಭ ಅಸ್ಥಾನ ಕಾರುಣ್ಯದ ಉತ್ತಮ ನಿದರ್ಶನ. ಅರ್ಜುನ ಶತ್ರುಸೇನೆಯಲ್ಲಿ ತಂದೆ ಸ್ಥಾನದಲ್ಲಿರುವವರು, ಅಜ್ಜನ ಸ್ಥಾನದಲ್ಲಿರುವವರು, ಆಚಾರ್ಯರು, ಮಾವಂದಿರು, ಸಹೋದರರು, ಮಕ್ಕಳು, ಮೊಮ್ಮಕ್ಕಳು, ಹೆಣ್ಣುಕೊಟ್ಟ ಮಾವ, ಸ್ನೇಹಿತರು ಎಲ್ಲರೂ ಎರಡೂ ಉಭಯ ಸೈನ್ಯದಲ್ಲಿದ್ದರು. ಇದನ್ನು ನೋಡಿದಾಗ ಅರ್ಜುನನಿಗೆ ಅತೀವ ಕರುಣೆ ಉಂಟಾಗಿ ಯುದ್ಧ ಮಾಡುವುದಿಲ್ಲ ಎಂದು ಕೈಚೆಲ್ಲಿ ನಿಲ್ಲುತ್ತಾನೆ. ಇಂಥ ಕಾರುಣ್ಯ ಸರಿಯಲ್ಲ ಎಂಬ ಉಲ್ಲೇಖ ಮಹಾಭಾರತದಲ್ಲಿದೆ ಎಂದರು.
ಅರ್ಜುನನ ಅಸ್ಥಾನ ಕಾರುಣ್ಯ, ಅಸ್ಥಾನ ಧರ್ಮ, ಅಸ್ಥಾನ ಅಧರ್ಮ, ಅಸ್ಥಾನ ಸ್ನೇಹ, ಅಸ್ಥಾನ ಧರ್ಮಬುದ್ಧಿ, ಅಸ್ಥಾನ ಅಧರ್ಮಬುದ್ಧಿಯ ಕಾರಣದಿಂದ ಅದನ್ನು ಸರಿಪಡಿಸಲು ಶ್ರೀಕೃಷ್ಣ ಭಗವದ್ಗೀತೆಯ ಉಪದೇಶ ಮಾಡಬೇಕಾಯಿತು. ಇದು ಗೀತಾಶಾಸ್ತ್ರದ ಉದಯಕ್ಕೆ ಕಾರಣ ಎಂದು ವಿವರಿಸಿದರು.
ಕ್ರಿಯಾಶೀಲತೆ ಇರಬೇಕಾದಲ್ಲಿ ಜಾಡ್ಯತೆ ಇತ್ತು. ಕಾಠಿಣ್ಯ ಇರಬೇಕಾದಲ್ಲಿ ಕಾರುಣ್ಯ ಇತ್ತು. ಯುದ್ಧೋತ್ಸಾಹ ಇರಬೇಕಾದಲ್ಲಿ ನಿರಾಸೆಯಿಂದ ಅರ್ಜುನ ಕುಳಿತಿದ್ದ. ಆ ಸಂದರ್ಭದಲ್ಲಿ ಧರ್ಮಯುದ್ಧಕ್ಕಾಗಿ ಸಜ್ಜಾಗುವಂತೆ ಕೃಷ್ಣ ಬೋಧಿಸುತ್ತಾನೆ. ಅರ್ಜುನನ ಈ ಕಾರುಣ್ಯಕ್ಕೆ ನಪುಂಸಕತ್ವ ಎಂದು ಕೃಷ್ಣ ಈ ಸಂದರ್ಭದಲ್ಲಿ ಹೇಳಿದ್ದಾನೆ. ಕಾರುಣ್ಯ ಕೂಡಾ ಕೆಲವೊಮ್ಮೆ ದೌರ್ಬಲ್ಯವಾಗುತ್ತದೆ ಎನ್ನುವುದಕ್ಕೆ ಇದು ಉದಾಹರಣೆ ಎಂದರು.
ಧಾರ್ಮಿಕ ಕಾರ್ಯಕ್ರಮ ಅಂಗವಾಗಿ ಸಾಮವೇದ ಪಾರಾಯಣ, ರುದ್ರಹವನ, ರಾಮತಾರಕ ಹವನ, ಚಂಡೀ ಪಾರಾಯಣ, ಗಣಪತಿ ಹವನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿವಾನಂದ ಹೆಗಡೆ ಹಡಿನ್ಬಾಳ್ ಹಾಗೂ ಭಾಗ್ಯಲಕ್ಷ್ಮಿ ಅವರಿಂದ ಹಿಂದೂಸ್ತಾನಿ ಗಾಯನ ನಡೆಯಿತು.

300x250 AD
Share This
300x250 AD
300x250 AD
300x250 AD
Back to top