ಹೊನ್ನಾವರ: ತಾಲೂಕಿನ ಚಂದಾವರ ಗ್ರಾ.ಪಂ. ವ್ಯಾಪ್ತಿಯ ವಡಗೇರಿ ಸಮೀಪ 19 ಕೋಟಿ ವೆಚ್ಚದ ಕುಮಟಾ- ಕೊಡಮಡುಗು ರಾಜ್ಯ ಹೆದ್ದಾರಿಯ ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಶುಕ್ರವಾರ ಚಾಲನೆ ನೀಡಿದರು.
ಎಸ್‌ಎಚ್‌ಡಿಪಿ ಮತ್ತು ಲೊಕೋಪಯೋಗಿ ಇಲಾಖೆಯಡಿ ಹೊನ್ನಾವರ ಮತ್ತು ಕುಮಟಾ ತಾಲೂಕಿನ ಎರಡು ರಸ್ತೆಗೆ 22 ಕೋಟಿ ಮಂಜೂರಾಗಿದ್ದು, ಅದರಲ್ಲಿ ಕೊಡಮುಡುಗು, ಕುಮಟಾ ಸಂಪರ್ಕಿಸುವ 12.50 ಕಿ.ಮೀ ರಸ್ತೆ, ಅಗಲೀಕರಣ ಹಾಗೂ ಡಾಂಬರಿಕರಣ ಕಾಮಗಾರಿಗೆ 19 ಕೋಟಿ ಬಿಡುಗಡೆಯಾಗಿದೆ.
ಈ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಶಾಸಕರು ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೂಲಕ ಗ್ರಾಮೀಣ ಭಾಗದಲ್ಲಿಯೂ ಹಲವು ರಸ್ತೆ, ಸೇತುವೆ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಬಂಗಡೆ ಬಳಿ ಕೊಚ್ಚಿ ಹೋದ ಸೇತುವೆಯನ್ನು 2.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಕಾನಕ್ಕಿ ರಸ್ತೆ, ಕೆರಮನೆ ಕಚ್ಚರಕೆ-ಕವಲಕ್ಕಿ ರಸ್ತೆ 8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಚಂದಾವರ- ಅರೇಅಂಗಡಿ ರಸ್ತೆ 2 ಕೋಟಿ ವೆಚ್ಚದ ಕಾಮಗಾರಿ ಟೆಂಡರ್ ಹಂತದಲ್ಲಿದೆ. ದರ್ಬೆಜಡ್ಡಿ ಬಳಿ ಮೂರು ಸೇತುವೆ ಸಾಲ್ಕೋಡ್ ಹೊಳೆಗೆ 1ಕೋಟಿ ವೆಚ್ಚದ ಸೇತುವೆ ನಿರ್ಮಾಣವಾಗಿದೆ. ಸಾಲ್ಕೋಡ್ ಸೇತುವೆ ಮುಂದುವರೆದ ಕಾಮಗಾರಿ ಮಳೆಗಾಲದ ಬಳಿಕ ನಡೆಯಲಿದೆ. ಪಟ್ಟಣದಲ್ಲಿ 6 ಕೋಟಿ ವೆಚ್ಚದ ಬಸ್ ನಿಲ್ದಾಣ, 8 ಕೋಟಿ ವೆಚ್ಚದ ಪದವಿ ಕಾಲೇಜು ಕಟ್ಟಡ, ಜಲಜೀವನ ಮಿಷನ್ ಅಡಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಂಪರ್ಕ ಕಾಮಗಾರಿ ನಡೆದಿದೆ. 2 ಕೋಟಿ ವೆಚ್ಚದ ಆರ್.ಟಿ.ಓ ಕಛೇರಿ ನಿರ್ಮಾಣಕ್ಕ ಜಾಗ ಮಂಜೂರಾಗಿದೆ ಎಂದರು.
ಕೊರೋನಾ ಸಮಯದಲ್ಲಿ ಕೇಂದ್ರ ಹಾಗೂ ಸರ್ಕಾರ ಜನಸಾಮನ್ಯರಿಗೆ ಹಲವು ಯೋಜನೆ ನೀಡಿದೆ. ಶಾಲೆ ಬಂದ್ ಆದರೂ ಶಿಕ್ಷಕರ ವೇತನ, ಸಾರಿಗೆ ವ್ಯವಸ್ಥೆ ಇಲ್ಲದೇ ಹೊದರು ಸಿಬ್ಬಂದಿಗಳ ವೇತನ ಪಾವತಿ ಮಡಿದೆ. ಉಚಿತ ಕೋವಿಡ್ ಲಸಿಕೆ, ಉಚಿತ ಅಡುಗೆ ಅನಿಲ ವಿತರಣೆ, ಕಾರ್ಮಿಕ ಇಲಾಖೆಯಿಂದ ಹಣ ಬಿಡುಗಡೆ, ಉಚಿತ ವಿದ್ಯುತ್ ಸಂಪರ್ಕ, ಫಸಲ್ ಭೀಮಾ ಯೋಜನೆಯಡಿ ಅನುದಾನ ನೀಡುವ ಮೂಲಕ ಹಲವು ಯೋಜನೆಯನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಿದೆ ಎಂದರು.
ವಡಗೇರಿ ಪ್ರಾಥಮಿಕ ಶಾಲೆಗೆ ರಂಗಮಂದಿರ ಒದಗಿಸುವಂತೆ ಶಾಲಾ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೀತಾರಾಮ ನಾಯ್ಕ ನೇತೃತ್ವದಲ್ಲಿ ಶಾಲಾ ಶಿಕ್ಷಕರು ಹಾಗೂ ಸಾರ್ವಜನಿಕರು ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿ ಶಾಸಕರ ಪ್ರವೇಶಾಭಿವೃದ್ದಿ ನಿಧಿಯಿಂದ ಹಣ ಬಿಡುಗಡೆಗೊಳಿಸುವ ಬಗ್ಗೆ ಭರವಸೆ ನೀಡಿದರು.
ಗ್ರಾ.ಪಂ. ಅಧ್ಯಕ್ಷೆ ಛಾಯಾ ಉಬೇಕರ್, ಕೃಷ್ಣ ಗೌಡ, ಸತೀಶ ಹೆಬ್ಬಾರ, ಸದಸ್ಯರಾದ ಆಸಿಪ್ ಅಲಿಘನಿ, ಹುದಾ ಹುಸೇನ್, ಮಲ್ಲಿಕಾ ಭಂಡಾರಿ, ಮಂಜುನಾಥ ಮಡಿವಾಳ, ಅಖಿಲ್ ಖಾಜಿ, ಅಣ್ಣಪ್ಪ ನಾಯ್ಕ, ಜಟ್ಟು ಮುಕ್ರಿ, ಗಣಪು ಮುಕ್ರಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಯೋಗಾನಂದ ಸುದರ್ಶನ, ಎಂ.ಎಸ್.ನಾಯ್ಕ, ಪಂಚಾಯತಿ ಅಭಿವೃದ್ದಿ ಅಧಿಕಾರಿ ವಿ.ಎ.ಪಟಗಾರ, ಸಿಬ್ಬಂದಿಗಳು, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಹಾಜರಿದ್ದರು.