ಹೊನ್ನಾವರ: ತಾಲೂಕಿನ ಕೊಂಕಣಿ ಕಲಾ ಕುಟಾಮ್ ನೇತೃತ್ವದಲ್ಲಿ ಪಟ್ಟಣದ ಸೋಷಿಯಲ್ ಕ್ಲಬ್ ಸಭಾಭವನದಲ್ಲಿ 30ನೇ ರಾಷ್ಟ್ರೀಯ ಕೊಂಕಣಿ ಮಾನ್ಯತಾ ದಿನವನ್ನು ಆಚರಿಸಲಾಯಿತು.
ಕಾಸರಕೋಡಿನ ಹಿರಿಯ ಕಲಾವಿದ ವಲೇರಿಯನ ಜೋರ್ಜ ಅವರನ್ನು ಸಂಘಟನೆ ಪರವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಸಂವಿಧಾನದ 8ನೇ ಪರಿಚ್ಛೇದದಲ್ಲಿ ಕೊಂಕಣಿ ಭಾಷೆಗೆ ರಾಷ್ಟ್ರೀಯ ಮಾನ್ಯತೆ ದೊರಕಿರುವುದು ನಮ್ಮೆಲ್ಲಾ ಕೊಂಕಣಿ ಭಾಷಿಕರ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು.
ಸಂಘಟನೆಯ ಅಧ್ಯಕ್ಷ ಸ್ಟೀಫನ ರೊಡ್ರಿಗಸ್ ಮಾತನಾಡಿ, ನಮ್ಮ ಮಾತೃ ಭಾಷೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಸಂಘದ ಉಪಾಧ್ಯಕ್ಷ ಪ್ರಾನ್ಸಿಸ್ ಫರ್ನಾಂಡಿಸ ಮಂಕಿ ಸ್ವಾಗತಿಸಿ, ಸಂಚಾಲಕ ಎಡ್ವಿನ್ ಡಯಾಸ್ ವಂದಿಸಿದರು. ಸಹ ಕಾರ್ಯದರ್ಶಿ ಸಂಗೀತಾ ಡಿಸೋಜಾ ನಿರೂಪಿಸಿದರು. ಕಲಾವಿದ ಎಸ್.ಲೋಪಿಸ್ ನೇತೃತ್ವದಲ್ಲಿ ಹಲವಾರು ಸದಸ್ಯರು ವಿವಿಧ ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
30ನೇ ರಾಷ್ಟ್ರೀಯ ಕೊಂಕಣಿ ಮಾನ್ಯತಾ ದಿನ ಆಚರಣೆ
