ದಾಂಡೇಲಿ: ನಗರದ ಕುಳಗಿ ರಸ್ತೆಯಲ್ಲಿರುವ ದಾಂಡೇಲಪ್ಪಾ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ 63ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಸಂಘದ ಅಧ್ಯಕ್ಷ ಅರ್ಜುನ್ ಡಿ.ಮಿರಾಶಿಯವರ ಅಧ್ಯಕ್ಷತೆಯಲ್ಲಿ ಗುರುವಾರ ಜರುಗಿತು.
ಸಭೆಯಲ್ಲಿ ದಾಂಡೇಲಪ್ಪಾ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಸಾಧನೆಯನ್ನು ಶ್ಲಾಘಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸಿಬ್ಬಂದಿ ಪ್ರಾಮಾಣಿಕ ಶ್ರಮ ಮತ್ತು ಸೇವಾ ಬದ್ಧತೆಗೆ ಸಭೆಯಲ್ಲಿ ಮುಕ್ತಕಂಠದಿಂದ ಕೃತಜ್ಞತೆಯನ್ನು ಸಲ್ಲಿಸಲಾಯ್ತು. ಸಂಘದ ಸದಸ್ಯರಿಗೆ 7%ರಂತೆ ಷೇರು ಡಿವಿಡೆಂಟ್ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಸಂಘವು ವರ್ಷದಿಂದ ವರ್ಷಕ್ಕೆ ಆರ್ಥಿಕವಾಗಿ ಲಾಭದಲ್ಲಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತವಾಯ್ತು. ಸಂಘವು ನೂತನವಾಗಿ ಆರಂಭಿಸಿರುವ ಸೂಪರ್ ಮಾರ್ಕೆಟಿನ ಪ್ರಗತಿಗೆ ಎಲ್ಲರು ಒಂದಾಗಿ ಶ್ರಮಿಸಬೇಕೆಂದು ಕರೆ ನೀಡಲಾಯಿತು.
ಸಭೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಂಘದ ಹಿರಿಯ ಸದಸ್ಯರಿಗೆ ಸನ್ಮಾನಿಸಲಾಯ್ತು. ಕೃಷಿ ಕ್ಷೇತ್ರದ ಸಾಧಕ ಹಾಗೂ ಜಿಲ್ಲಾ ಮಟ್ಟದ ಆತ್ಮ ಯೋಜನೆಯ ಸಲಹಾ ಸಮಿತಿಯ ಸದಸ್ಯರಾದ ಪರಶುರಾಮ ಎಚ್.ಬಿಯವರಿಗೆ ಸನ್ಮಾನಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣ ಪೂಜಾರಿಯವರು ಸಂಘದ ವಾರ್ಷಿಕ ವರದಿಯನ್ನು ಮಂಡಿಸಿ, ಸಂಘದ ಸರ್ವತೋಮುಖ ಪ್ರಗತಿಗೆ ಮಾರ್ಗದರ್ಶನ ನೀಡುತ್ತಿರುವ ಸಂಘದ ಆಡಳಿತ ಮಂಡಳಿಯ ಮತ್ತು ಸಂಘದ ಸರ್ವ ಸದಸ್ಯರ ಪ್ರೋತ್ಸಾಹ ಸ್ಮರಣೀಯವಾಗಿದೆ. ಮಧ್ಯವರ್ತಿ ಬ್ಯಾಂಕ್ ಆಗಿರುವ ಕೆಡಿಸಿಸಿ ಬ್ಯಾಂಕಿನ ಸಕಾಲಿಕ ಸ್ಪಂದನೆ ಮತ್ತು ಮಾರ್ಗದರ್ಶನವು ಸಂಘದ ಉನ್ನತಿಗೆ ಪ್ರೇರಣೆಯಾಗಿದೆ. ಅಂತೆಯೆ ಸಿಬ್ಬಂದಿಗಳ ಅವಿರತ ಶ್ರಮ ಮತ್ತು ದಕ್ಷತೆ ಸಂಘದ ಪ್ರಗತಿಗೆ ಬಹುಮೂಲ್ಯ ಕಾರಣವಾಗಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಹಕಾರ ಇರಲೆಂದು ವಿನಂತಿಸಿದರು.
ಸಂಘದ ಉಪಾಧ್ಯಕ್ಷ ಸಂತಾನ ಬಿ.ನಾಯ್ಕ, ನಿರ್ದೇಶಕರುಗಳಾದ ಶಂಕರ ಎನ್.ಮಿರಾಶಿ, ಶಾಂತಾ ಎನ್.ಪಿಸಾಳಿ, ಪಾಂಡುರಂಗ ವಿ.ವಟ್ಲೇಕರ, ಮಾರುತಿ ಮಿರಾಶಿ, ಶಾಂತರಾಮ ಹರಿಜನ, ಯಶೋಧಾ ಮಿರಾಶಿ, ಚಂದ್ರಹಾಸ ಪೂಜಾರಿ, ರತ್ನಾ ರಮೇಶ ಮಿರಾಶಿ, ಓಮಣ್ಣಾಯ ಮೋಗ್ರಿ, ವಿಲ್ಸನ್ ನಾರಗೋಳಕರ ಮುಂತಾವದರು ಇದ್ದರು.