ಸಿದ್ದಾಪುರ: ಪಟ್ಟಣದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಬಾಲಕೃಷ್ಣ ವೇಷಧಾರಿಗಳು ಮತ್ತು ಸ್ವಾತಂತ್ರ‍್ಯ ವೀರರ ವೇಷಭೂಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಕೃಷ್ಣ ವೇಷಧಾರಿ ಸ್ಪರ್ಧೆಯಲ್ಲಿ ಲೇಪಿತ್ ಅಪ್ಪಿನಬೈಲ್ ಪ್ರಥಮ, ಸಾಗರ್ ರಾವ್ ದ್ವಿತೀಯ ಹಾಗೂ ಗೀತಾ- ರಿಷಿಕಾ (ತೃತೀಯ) ಬಹುಮಾನವನ್ನು ಪಡೆದುಕೊಂಡರು. ಸ್ವಾತಂತ್ರ‍್ಯ ವೀರರ ವೇಷಭೂಷಣ ಸ್ಪರ್ಧೆಯಲ್ಲಿ ರಿಷಬ್ ನಾಯ್ಕ ಪ್ರಥಮ, ನಿತಿಕ್ಷಾ ಹೊಸೂರ ದ್ವಿತೀಯ ಹಾಗೂ ರಚಿತಾ ನಾಯ್ಕ ತೃತೀಯ ಬಹುಮಾನವನ್ನು ಪಡೆದುಕೊಂಡರು.
ಸ್ಪರ್ಧೆಯಲ್ಲಿ ನಿವೃತ್ತ ಶಿಕ್ಷಕ ಆರ್.ಕೆ.ಹೊನ್ನೆಗುಂಡಿ, ನಾಟ್ಯಾಚಾರ್ಯ ಶಂಕರ್ ಭಟ್ ಹೊಸೂರ, ಪತ್ರಕರ್ತ ಸುರೇಶ ಮಡಿವಾಳ ಕಡಕೇರಿ ನಿರ್ಣಾಯಕರಾಗಿ ಭಾಗವಹಿಸಿದ್ದರು. ಈಶ್ವರಿ ವಿಶ್ವವಿದ್ಯಾಲಯದ ವೀಣಾಜಿ, ದೇವಿಕಾಜಿ, ಲೀಲಾಜಿ ಮಾರ್ಗದರ್ಶನದಲ್ಲಿ ಕಾರ್ಯಕ್ರಮವು ಅತ್ಯಂತ ಸುಂದರವಾಗಿ, ಅಚ್ಚುಕಟ್ಟಾಗಿ ಸಂಘಟಿತವಾಗಿತ್ತು. ತಂದೆ- ತಾಯಂದಿರು, ಪೋಷಕರು ಮುದ್ದು ಮಕ್ಕಳ ತುಂಟಾಟವನ್ನು ಕಣ್ಣ ತುಂಬಿಕೊಂಡು ಖುಷಿಪಟ್ಟರು.
ತಾಲೂಕಿನ 78 ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪುಟಾಣಿಗಳು ಕದ್ದು ಬೆಣ್ಣೆ ತಿನ್ನುವ ಕೃಷ್ಣನಾಗಿ, ಕೊಳಲುವಾದಕನಾಗಿ ರಾಧಾ,ರುಕ್ಮಿಣಿ ಯರ ಮನಕದ್ದ ಕೃಷ್ಣನಾಗಿ, ಯಕ್ಷಗಾನ ವೇಷ ಧಾರಿ ಕೃಷ್ಣನಾಗಿ ಮನ ಸೆಳೆದರು. ಮದ್ದು ರಾಧೆಯಾಗಿ, ಕಿತ್ತೂರು ರಾಣಿ ಚೆನ್ನಮ್ಮ, ನೆಹರು, ಭಗತ್ ಸಿಂಗ್, ಅಂಬೇಡ್ಕರ್ ಹೀಗೆ ವಿವಿಧ ವೇಷಭೂಷಣಗಳಿಂದ ಕಂಗೊಳಿಸುತ್ತಿದ್ದರು.