Slide
Slide
Slide
previous arrow
next arrow

ನಿಸ್ವಾರ್ಥದಿಂದ ಜಾನಪದ ಕಲೆ ಉಳಿಸುತ್ತಿರುವ ಶಾರದಾ ಮೊಗೇರ್’ಗೆ ಕಸಾಪದಿಂದ ಸನ್ಮಾನ

300x250 AD

ಬೈಲೂರು: ಇಲ್ಲಿನ ಬೆದ್ರಕೇರಿಯ ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿಯ 2022ನೇ ಸಾಲಿನ ಜನಪದ ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ಶ್ರೀಮತಿ ಶಾರದಾ ಮಾದೇವ ಮೊಗೇರ ಅವರನ್ನು ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಹಿತಿ ಝಮೀರುಲ್ಲ ಷರೀಫ್ ಮಾತನಾಡಿ, ಜನವಾಣಿ ಬೇರು ಕವಿವಾಣಿ ಹೂವು ಎಂಬಂತೆ ಎಲ್ಲ ಸಾಹಿತ್ಯಗಳ ತಾಯಿಬೇರು ಜನಪದ ಸಾಹಿತ್ಯ. ಎಲೆಮರೆಯ ಕಾಯಿಯಂತಿರುವ ಜನಪದ ಹಾಡುಗಳನ್ನು ಹಾಡುತ್ತ ಆ ಸಾಹಿತ್ಯವನ್ನು ಉಳಿಸಿಕೊಂಡು, ಯಾವುದೇ ಪ್ರಶಸ್ತಿ ಪುರಸ್ಕಾರಗಳ ಹಿಂದೆ ಹೋಗದೇ ಇರುವ ಜನಪದ ಗಾಯಕಿ ಶಾರದಾ ಮೊಗೇರ ಅವರಿಗೆ ಜನಪದ ಅಕಾಡೆಮಿ ಪ್ರಶಸ್ತಿ ಸಂದಿರುವುದು ತುಂಬ ಸಂತೋಷದ ವಿಚಾರ ಎಂದು ನುಡಿದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅವರ ಮನೆಗೇ ತೆರಳಿ ಸನ್ಮಾನಿಸಿ ಗೌರವಿಸುತ್ತಿರುವುದು ಅಭಿನಂದನಾರ್ಹ ಕಾರ್ಯ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ನಮ್ಮ ತಾಲೂಕಿನ ಹಾಡುಹಕ್ಕಿಗೆ ಜನಪದ ಅಕಾಡೆಮಿ ಪ್ರಶಸ್ತಿ ಬಂದಿರುವುದು ನಮಗೆಲ್ಲ ಹೆಮ್ಮೆ. ಇಂತಹ ತೆರೆ ಮರೆಯಲ್ಲಿರುವ ಅನೇಕ ಕಲಾವಿದರನ್ನು, ಕಾಯಕ ಯೋಗಿಗಳನ್ನು ಗುರುತಿಸಿ ಮುನ್ನೆಲೆಗೆ ತರಬೇಕಿದೆ. ಜನಸಮುದಾಯದ ನಡುವಿನ ಕಲಾವಿದರು, ಜನಪದ ಗಾಯಕರ ಮಾಹಿತಿ, ವಿವರಗಳನ್ನು ಸಾಹಿತ್ಯ ಪರಿಷತ್ತಿಗೆ ತಲುಪಿಸುವ ಕಾರ್ಯವನ್ನು ಸಾರ್ವಜನಿಕರು ಮಾಡಿದಲ್ಲಿ ಅಂಥವರನ್ನು ಕನ್ನಡ ರಾಜ್ಯೋತ್ಸವ, ಸಾಹಿತ್ಯ ಸಮ್ಮೇಳನಗಳಲ್ಲಿ ಗುರುತಿಸಿ ಗೌರವಿಸುವ ಕಾರ್ಯವನ್ನು ಪರಿಷತ್ತು ಮಾಡಲಿದೆ ಎಂದು ನುಡಿದರು.

300x250 AD

ಜಿಲ್ಲಾ ಕಸಾಪ ಕಾರ್ಯದರ್ಶಿ ಪಿ.ಆರ್.ನಾಯ್ಕ ಮಾತನಾಡಿ, ಜಿಲ್ಲಾ ಕಸಾಪ ಜಿಲ್ಲೆಯಾಧ್ಯಂತ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ, ಗೌರವಕ್ಕೆ ಭಾಜನರಾದ ಮಹನೀಯರನ್ನು ಅವರ ಮನೆಗೆ ತೆರಳಿ ಸನ್ಮಾನಿಸುವ ಪರಿಪಾಠವನ್ನು ಆರಂಭಿಸಿದು ಇಂದು ಭಟ್ಕಳ ತಾಲೂಕಾ ಕಸಾಪ ವತಿಯಿಂದ ಶಾರದಾ ಮೊಗೇರ ಅವರನ್ನು ಸನ್ಮಾನಿಸುವ ಹೆಮ್ಮೆ ನಮ್ಮದಾಗಿದೆ ಎಂದು ನುಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾರದಾ ಮೊಗೇರ ತಮ್ಮ ಮನೆಗೆ ಆಗಮಿಸಿ ಗೌರವಿಸಿದ ಸಾಹಿತ್ಯ ಪರಿಷತ್ತಿಗೆ ಕೃತಜ್ಞತೆ ಸಲ್ಲಿಸಿ ಬಾಲ್ಯದಲ್ಲಿ ತಮ್ಮ ತಾಯಿ, ಅಜ್ಜಿ ದಿನನಿತ್ಯದ ಕೃಷಿಕಾರ್ಯ, ಮದುವೆ ಮುಂತಾದ ಸಂದರ್ಭಗಳಲ್ಲಿ ಹಾಡುತ್ತಿದ್ದ ಗೀತೆಗಳನ್ನು ಕೇಳುತ್ತಾ ತಾನೂ ಕಲಿಯಲು ಸಾಧ್ಯವಾಯಿತು ಎಂದರಲ್ಲದೇ ಒಂದೆರಡು ಜನಪದ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿಕ್ಷಣ ಇಲಾಖೆಯ ವಿ.ಡಿ.ಮೊಗೇರ, ಸಾಹಿತಿ ಮಾನಾಸುತ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಸಾಪ ಸದಸ್ಯ ಎಂ.ಪಿ.ಭಂಡಾರಿ, ಶಾರದಾ ಮೊಗೇರ ಅವರ ಪತಿ ಮಾದೇವ ಮೊಗೇರ, ಪುತ್ರ ನರಸಿಂಹ ಮೊಗೇರ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಕಸಾಪ ಕಾರ್ಯದರ್ಶಿ ನಾರಾಯಣ ನಾಯ್ಕ ವಂದಿಸಿದರು.

Share This
300x250 AD
300x250 AD
300x250 AD
Back to top