ಅಯೋಧ್ಯೆ: ಈ ಬಾರಿಯ ದೀಪೋತ್ಸವ ಅಯೋಧ್ಯೆಯಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಅಕ್ಟೋಬರ್ 23 ರಂದು ಅಲ್ಲಿ 6ನೇ ದೀಪೋತ್ಸವ ನಡೆಯಲಿದ್ದು, ಈ ವೇಳೆ ಅಲ್ಲಿ 14.50 ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗಿಸಲು ಸಿದ್ಧತೆ ನಡೆದಿದೆ.
14.50 ಲಕ್ಷ ಹಣತೆಗಳನ್ನು ಏಕಕಾಲದಲ್ಲಿ ಬೆಳಗಿಸುವ ಮೂಲಕ ಅತ್ಯಧಿಕ ಹಣತೆಗಳನ್ನು ಬೆಳಗಿಸಿದ ಗಿನ್ನೆಸ್ ದಾಖಲೆ ಮಾಡಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ವರದಿಗಳು ತಿಳಿಸಿವೆ.
ಅಯೋಧ್ಯೆಯಲ್ಲಿ ದೀಪೋತ್ಸವ ಸಂಬಂಧ ಗುರುವಾರ ವಿಭಾಗೀಯ ಆಯುಕ್ತ ನವದೀಪ್ ರಿನ್ವಾ ಅವರ ಅಧ್ಯಕ್ಷತೆಯಲ್ಲಿ ವಿಭಾಗೀಯ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು.
2017ರಲ್ಲಿ ದೀಪೋತ್ಸವ ಪ್ರಾರಂಭವಾಗಿತ್ತು. ಕಳೆದ ಎರಡು ವರ್ಷ ಕೋವಿಡ್ ಕಾರಣದಿಂದ ದೀಪೋತ್ಸವ ತುಸು ಮಂಕಾಗಿತ್ತು. ಆದರೆ ಈ ವರ್ಷ ಭಕ್ತಾದಿಗಳ ದಟ್ಟಣೆಯು ಅಧಿಕವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಕೋವಿಡ್-19 ಪರಿಣಾಮ ಕಡಿಮೆಯಾಗಿರುವುದರಿಂದ ದೀಪೋತ್ಸವದಲ್ಲಿ ಭಾಗವಹಿಸುವವರ ಸಂಖ್ಯೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚಾಗಿರಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಆಡಳಿತದ ಅಧಿಕಾರಿಗಳೊಂದಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ಆಯುಕ್ತ ನವದೀಪ್ ರಿನ್ವಾ ಹೇಳಿದರು.
ಸೆಪ್ಟೆಂಬರ್ 30ರೊಳಗೆ ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಅಲ್ಲದೆ, ಉತ್ಸವದ ವ್ಯವಸ್ಥೆ ಮಾಡುವಾಗ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ನಡುವೆ ಸಮನ್ವಯತೆ ಇರಬೇಕು ಎಂದು ಅವರು ಸೂಚನೆ ನೀಡಿದ್ದಾರೆ.