ಭಟ್ಕಳ: ಸ್ವಾತಂತ್ರ್ಯೋತ್ಸವವು ಭಾರತದ ಭಾಗ್ಯೋದಯದ ಶುಭದಿನವಾಗಿದೆ ಎಂದು ಸಾಹಿತಿ ಮಾನಸುತ ಹೆಗಡೆ ನುಡಿದರು.
ಅವರು ಭಾವನಾ ವಾಹಿನಿ ಹಾಗೂ ತಾಲೂಕು ಕಸಾಪ ಆಯೋಜಿಸಿದ ಭಾವನಾ ಸ್ವಾತಂತ್ರ್ಯೋತ್ಸವ ಸಂಭ್ರಮ ಕಾರ್ಯಕ್ರಮದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಆಜಾದಿ ಕಾ ಅಮೃತಮಹೋತ್ಸವದ ಸಂತಸದ ಸಂಕೇತವಾಗಿ ಮನೆಮನೆಗಳಲ್ಲಿ ರಾಷ್ಟ್ರಧ್ವಜವು ಹಾರಾಡುತ್ತಿದೆ. ಜಗತ್ತಿನಲ್ಲಿ ಎಲ್ಲಾ ರಂಗಗಳಲ್ಲೂ ಮುಂಚೂಣಿಯಲ್ಲಿರುವ ಭಾರತವು ಮತ್ತಷ್ಟು ಎತ್ತರಕ್ಕೆ ಏರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಭಟ್ಕಳ ತಾಲೂಕು ಕಸಾಪ ವಿನೂತನ ಕವಿಗೋಷ್ಠಿ ಏರ್ಪಡಿಸಿ ನಮ್ಮೆಲ್ಲರ ಸಂಭ್ರಮವನ್ನು ಹೆಚ್ಚಿಸಿದೆ ಎಂದು ನುಡಿದು ಸ್ವರಚಿತ ಕವನ ವಾಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಆರ್.ಎಸ್.ನಾಯಕ ಮಾತನಾಡಿ, ಕವಿಗಳು ಜಾತಿ, ಧರ್ಮ, ಮತಗಳನ್ನು ಮೀರಿ ಶುದ್ಧ ಮಾನವೀಯ ಅಂತಃಕರಣವನ್ನು ಬಯಸುತ್ತಾರೆ. ಅಂತಹ ಶುದ್ಧ ಮನಸಿನಿಂದ ದೇಶವನ್ನು ಮತ್ತಷ್ಟು ಅಭಿವೃದ್ದಿ ಪಥದತ್ತ ಸಾಗಿಸುವ ಕಾರ್ಯ ಎಲ್ಲರಿಂದಾಗಬೇಕಿದೆ ಮಾತ್ರವಲ್ಲ ದೇಶಕ್ಕಾಗಿ ದುಡಿದ ಎಲ್ಲ ಮಹನೀಯರ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ದಾಟಿಸಬೇಕು. ಗಳಿಸಿದ ಸ್ವಾತಂತ್ರ್ಯ ಎಲ್ಲರಿಗೂ ಸಿಗುವಂತಾಗಬೇಕೆಂದು ನುಡಿದು, ಸಂದರ್ಭೋಚಿತ ಕಾರ್ಯಕ್ರಮ ಸಂಘಟಿಸಿದ ಭಾವನಾ ವಾಹಿನಿ ಹಾಗೂ ಸಾಹಿತ್ಯ ಪರಿಷತ್ತಿನ ಕಾರ್ಯವನ್ನು ಶ್ಲಾಘಿಸಿ ತಮ್ಮ ಕವಿತೆ ವಾಚಿಸಿದರು.
ಆಶಯ ನುಡಿಗಳನ್ನಾಡಿದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಕನ್ನಡ ಸಾಹಿತ್ಯವು ಮಾನವ ಜಾತಿ ತಾನೊಂದೇ ವಲಂ, ಮನುಜ ಮತ ವಿಶ್ವಪಥವಾಗಬೇಕೆಂಬ ಆಶಯವನ್ನು ಜಗತ್ತಿಗೆ ಸಾರಿದೆ. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಅಮೃತ ಮಹೋತ್ಸವದ ವಸ್ತುವನ್ನಿರಿಸಕೊಂಡೇ ನಮ್ಮ ತಾಲೂಕಿನ ಕವಿಗಳು ಕವಿತೆ ವಾಚಿಸುವ ಮೂಲಕ ತಮ್ಮ ಆಶಯವನ್ನು ಅಭಿವ್ಯಕ್ತಿಸು ಕವಿಗೋಷ್ಠಿಯನ್ನು ಆಯೋಜಿಸಿದೆ. ನಾವೆಲ್ಲರೂ ಇಂದು ಸ್ವಾತಂತ್ರ್ಯಕ್ಕಾಗಿ ಹೋರಾಟ ಅಥವಾ ಪ್ರಾಣತ್ಯಾಗ ಮಾಡಬೇಕಾಗಿಲ್ಲ. ನಮ್ಮ ನಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಅದೇ ದೇಶಕ್ಕೆ ನಾವು ನಾವು ಮಾಡುವ ಸೇವೆ ಎಂದು ನುಡಿದರು. ಅಲ್ಲದೇ, ಸಾಹಿತ್ಯ ಪರಿಷತ್ತು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಸಂಘಟಿಸಲಿದೆ ಎಂದರು.
ಕವಿಗಳಾದ ಎಂ.ಡಿ.ಪಕ್ಕಿ, ನೇತ್ರಾವತಿ ಆಚಾರ್ಯ, ಪೂರ್ಣಿಮ ನಾಯ್ಕ, ಪ್ರತಿಭಾ ಕರ್ಕಿಕರ್, ಮಂಜುನಾಥ ಯಲ್ವಡಿಕವೂರ, ರಝಾ ಮಾನ್ವಿ, ಕೃಷ್ಣ ಮೊಗೇರ ಅಳ್ವೆಕೋಡಿ, ಸತೀಶ ದೇವಾಡಿಗ, ಉಷಾ ಭವಾನಿಶಂಕರ ತಮ್ಮ ಕವಿತೆಗಳನ್ನು ವಾಚಿಸಿದರು. ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಧರ ಶೇಟ್ ಶಿರಾಲಿ ಕವಿಗೋಷ್ಠಿಯನ್ನು ನಿರ್ವಹಿಸಿ, ತಮ್ಮ ಸ್ವರಚಿತ ಕವಿತೆಯನ್ನು ವಾಚಿಸಿದರು. ಎಂ.ಪಿ.ಭಂಡಾರಿ ವಂದಿಸಿದರೆ, ಭಾವನಾ ವಾಹಿನಿಯ ಮುಖ್ಯಸ್ಥ ಭವಾನಿಶಂಕರ ನಾಯ್ಕ ಎಲ್ಲರಿಗೂ ಸ್ಮರಣಿಕೆ ನೀಡಿದರು.