ಶಿರಸಿ: ಸಂಪರ್ಕದ ಸೌಲಭ್ಯ ವಂಚಿತವಾಗಿರುವ ವಾನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಗುರಮನೆ ಮತ್ತು ಮೇಲಿನಗದ್ದೆ ಗ್ರಾಮಗಳಿಗೆ ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ಮಾನವೀಯತೆಯ ಅಡಿಯಲ್ಲಿ ತಾತ್ಪೂರ್ತಿಕ ರಸ್ತೆ ಸಂಪರ್ಕಿಸಿ, ಸಹಕರಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಹಶೀಲ್ದಾರ್ ಶ್ರೀಧರ ಮಂದಲಮನಿ ಅವರಿಗೆ ಸನ್ಮಾನಿಸಲಾಯಿತು.
ಹಗುರಮನೆ ಮತ್ತು ಮೇಲಿನಗದ್ದೆಯ ಪ್ರಮುಖರು ತಹಶೀಲ್ದಾರ್ ಕಛೇರಿಯಲ್ಲಿ ಅವರಿಗೆ ಸನ್ಮಾನಿಸಿ, ಕಾಡಿನ ಕಿರುಉತ್ಪನ್ನಗಳಲ್ಲಿ ಒಂದಾದ ಜೇನುತುಪ್ಪ ನೀಡಿ, ತಾತ್ಪೂರ್ತಿಕ ರಸ್ತೆಯ ವ್ಯವಸ್ಥೆಯ ಮೂಲಕ ಗ್ರಾಮಸ್ಥರ ತುರ್ತು ಸಮಸ್ಯೆಗೆ ಸ್ಪಂದಿಸಿರುವುದಕ್ಕೆ ತಮ್ಮ ಮುಗ್ದತೆಯಲ್ಲಿಯೂ ಅಭಿಮಾನ ಪೂರಕವಾದ ಕೃತಜ್ಞತೆ ಸಲ್ಲಿಸಿರುವುದು ಗಮನಾರ್ಹ ಅಂಶ.
ತಾಲೂಕಿನ ವಾನಳ್ಳಿ ಗ್ರಾಮ ಪಂಚಾಯತಿಯ ಹಗುರಮನೆ ಮತ್ತು ಮೇಲಿನಗದ್ದೆಯಲ್ಲಿ ಸುಮಾರು ಮೂವತ್ತು ಒಕ್ಕಲಿಗ ಕುಟುಂಬವು ಸೇತುವೆ ಸಂಪರ್ಕವಿಲ್ಲದೇ ವರ್ಷದ ಏಳು-ಏಂಟು ತಿಂಗಳಲ್ಲಿ ನಗರ ಸಂಪರ್ಕದಿಂದ ವಂಚಿತರಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಾರವಾರದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ, ತದನಂತರ ಚಾಪೆ, ದಿಂಬು ಸಹಿತ ಮಹಿಳೆಯರು ಮತ್ತು ಮಕ್ಕಳು ಶಿರಸಿ ತಹಶೀಲ್ದಾರ್ ಕಛೇರಿಯಲ್ಲಿ ಅಹೋರಾತ್ರಿ ಧರಣಿ ಜರುಗಿಸಿದ ಹಿನ್ನೆಲೆಯಲ್ಲಿ, ತಹಶೀಲ್ದಾರ್ 24 ತಾಸಿನಲ್ಲಿ ಗ್ರಾಮಕ್ಕೆ ಭೇಟಿ ನೀಡಿ, ಜಿಟಿಜಿಟಿ ಮಳೆಯಲ್ಲಿಯೂ 3 4 ಕೀ.ಮೀ ಕಾಲ್ನಡಿಗೆಯಲ್ಲಿ ಸುತ್ತಾಡಿ ಸಮಸ್ಯೆಗಳ ಗಂಭೀರತೆಯನ್ನು ಪರಿಗಣಿಸಿ, ಅರಣ್ಯ ಪ್ರದೇಶದಲ್ಲಿ ತಾತ್ಪೂರ್ತಿಕ ರಸ್ತೆ ಅವಕಾಶ ನೀಡಿ ಗ್ರಾಮಸ್ಥರ ಪ್ರಶಂಶೆಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಇಂದು ಗ್ರಾಮದ ಪರವಾಗಿ ಸನ್ಮಾನಿಸಿರುವರು.ಈ ಸಂಧರ್ಭದಲ್ಲಿ ಪ್ರಮುಖರಾದ ರಾಮು ಗೌಡ, ಗಣಪತಿ ಗೌಡ, ತಿಮ್ಮ ಗೌಡ, ಬೊಮ್ಮು ಗೌಡ ಅವರು ಉಪಸ್ಥಿತರಿದ್ದರು.