ಸಿದ್ದಾಪುರ: ವಾರ್ಷಿಕವಾಗಿ ಮಾಡಬೇಕಾಗಿರುವ ಕೆಲಸ ಕಾರ್ಯಗಳ ಕುರಿತಾಗಿ ಅಧಿಕಾರಿಗಳು ಎಚ್ಚರ ವಹಿಸಬೇಕು. ಮುಂದಿನ ದಿನಗಳಲ್ಲಿ ಉದ್ದೇಶಿತ ಯೋಜನೆಗಳನ್ನು ಪೂರ್ಣಗೊಳಿಸಲು ಕಾಲಾವಕಾಶ ಇಲ್ಲದಾಗುತ್ತದೆ. ಚುನಾವಣೆ, ನೀತಿಸಂಹಿತೆ ಮೊದಲಾದವು ಎದುರಾಗುತ್ತವೆ. ಈಗಲೆ ಅರ್ಧ ವರ್ಷ ಮುಗಿದಿದೆ. ಯೋಜನೆಯ ಅನುಷ್ಠಾನಕ್ಕೆ ಕೆಲಸದ ವೇಗವನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ತಾಲೂಕು ಆಡಳಿತ ಸೌಧದಲ್ಲಿ ಪ್ರಕೃತಿ ವಿಕೋಪ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ ತಾಲೂಕಿನಲ್ಲಿ ವಿಪರೀತ ಮಳೆಯಿಂದ ತಾಲೂಕಿನಾದ್ಯಂತ ಅಡಕೆಗೆ ಕೊಳೆರೋಗ ಕಾಣಿಸಿಕೊಂಡಿದ್ದು, ಸರಿಯಾದ ರೀತಿಯಲ್ಲಿ ಸಮೀಕ್ಷೆ ಮಾಡಿ ಸರಕಾರಕ್ಕೆ ವರದಿ ನೀಡಿ. ಕೊಳೆರೋಗ ಹೆಚ್ಚಾಗಿರುವ ಕುರಿತು ಮಾಹಿತಿ ಇದೆ. ಕೊಳೆ ರೋಗ, ಮಿಳ್ಳೆ ಉದರುವುದನ್ನು ತಡೆಯಲು ಸೂಕ್ತ ಮಾರ್ಗದರ್ಶನ ನೀಡಿ. ಕೊನೆಗೌಡರ ಕೊರತೆ ನೀಗಿಸಲು ಸಬ್ಸಿಡಿಯಲ್ಲಿ ದೋಟಿ ಎಷ್ಟು ಬೇಕು ಎನ್ನುವ ಮಾಹಿತಿಯನ್ನು ನೀಡುವಂತೆ ಅವರು ಸೂಚನೆ ನೀಡಿದರು.
ತಾಲೂಕಿನಲ್ಲಿ ಅತೀವೃಷ್ಠಿಯಿಂದ ಎರಡು ಸಾವು ಸಂಭವಿಸಿದೆ. ಹಿಂದೆ ಒಬ್ಬರಿಗೆ ಪರಿಹಾರ ನೀಡಲಾಗಿದೆ. ಇಂದು ಪ್ರಕೃತಿ ವಿಕೋಪದಲ್ಲಿ ಮೃತರಾದ ಬಿಳಗಿಯ ಚಿದಂಬರ್ ಕೆರಿಯಾ ಗೌಡ ರವರ ಪತ್ನಿ ಸುನಿತಾ ರವರಿಗೆ ಸರಕಾರದಿಂದ ನೀಡಲಾಗುವ ಪರಿಹಾರದ 5 ಲಕ್ಷ ಚೆಕ್ ನ್ನು ವಿತರಿಸಲಾಗಿದೆ.
ಶಾಲೆ, ಅಂಗನವಾಡಿ ಗಳ ಹತ್ತಿರ ಅಪಾಯ ದಲ್ಲಿರುವ ಮರಗಳನ್ನು ತೆಗೆಯಲು ಇಲಾಖೆಯ ಆಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ವಿಳಂಬವಾದರೆ ಗ್ರಾಮಸ್ಥರು, ಎಸ್.ಡಿ.ಎಮ್.ಸಿ ಯವರು ಅಂತಹ ಮರಗಳನ್ನು ತೆಗೆಯಿರಿ ಎಂದು ಅವರು ಸೂಚಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ವಿ. ರಾವ್, ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ನಾನು ಆಸ್ಪತ್ರೆಯಲ್ಲಿ ಇದ್ದರೂ ಕಾಗೇರಿ ಏಲ್ಲಿ ಹೋದರು ಎನ್ನುತ್ತಾರೆ. ಮುಂದಿನ ಹದಿನೈದು ದಿನಗಳ ಕಾಲ ನಾನು ಕ್ಷೇತ್ರದಲ್ಲಿ ಇರುವುದಿಲ್ಲ . ಕೆನಡಾದಲ್ಲಿ ನಡೆಯುವ ವಿಧಾನಸಭಾಧ್ಯಕ್ಷರ ಸಮ್ಮೇಳನದಲ್ಲಿ ಭಾಗವಹಿಸಲು ನಾಳೆ ತೆರೆಳುತ್ತಿದ್ದೇನೆ. ಯಾರಾದರೂ ಕಾಗೇರಿಯವರು ಏಲ್ಲಿ ಎಂದು ಕೇಳಿದರೆ, ಕೆನಡಾ ಹೋಗಿದ್ದಾರೆ ಎಂದು ಹೇಳಿ.
· ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್