ಕಾರವಾರ: ಜಿಲ್ಲೆಯ ಜನರ ಬಹು ನಿರೀಕ್ಷಿತ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಅನುಷ್ಠಾನ ಸಂಬಂಧ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ವರದಿ ನೀಡಲು ಹೈಕೋರ್ಟ್ ಮತ್ತೆ ನಾಲ್ಕು ವಾರ ಅವಧಿಯನ್ನ ವಿಸ್ತರಿಸಿ ಮಂಗಳವಾರ ಆದೇಶಿಸಿದೆ.
ಹುಬ್ಬಳ್ಳಿ- ಅಂಕೋಲಾ ನಡುವೆ ರೈಲ್ವೆ ಮಾರ್ಗವಾಗಬೇಕು ಎನ್ನುವುದು ದಶಕಗಳ ಕನಸು. ಕರಾವಳಿ ಹಾಗೂ ಘಟ್ಟದ ಮೇಲೆ ಸಂಪರ್ಕ ಕಲ್ಪಿಸುವ ಯೋಜನೆಯಿಂದ ನೂರಾರು ಉಪಯೋಗವಿದ್ದರು ಪರಿಸರ ವಾದಿಗಳ ವಿರೋಧದಿಂದ ಇಂದಿಗೂ ಯೋಜನೆ ಜಾರಿಯಾಗದೇ ನೆನೆಗುದಿಗೆ ಬಿದ್ದಿದೆ. ಕಳೆದ ವರ್ಷ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಯೋಜನೆ ಜಾರಿಗೆ ಸಮ್ಮತಿ ನೀಡಿದ್ದು ಯೋಜನೆ ಜಾರಿಯಾಗಬೇಕು ಎಂದು ಕನಸ್ಸಿಟ್ಟುಕೊಂಡಿದ್ದ ಜಿಲ್ಲೆಯ ಜನರ ಮುಖದಲ್ಲಿ ಖುಷಿ ಮೂಡಿಸಿತ್ತು. ಆದರೆ ಬೆಂಗಳೂರಿನ ಎನ್.ಜಿ.ಓ ಒಂದು ವನ್ಯ ಜೀವಿ ಮಂಡಳಿಯ ಅನುಮೋದನೆಗೆ ತಡೆಯಾಜ್ಞೆ ನೀಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದು ಹೈಕೋರ್ಟ್ ಸಹ ತಡೆಯಾಜ್ಞೆ ನೀಡಿದ್ದು ಜಿಲ್ಲೆಯ ಜನರಿಗೆ ನಿರಾಸೆ ಮೂಡಿಸಿತ್ತು.
ಯೋಜನೆ ಅನುಷ್ಠಾನ ಆಗಲೇ ಬೇಕು ಎಂದು ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿರುವ ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿಯವರು ಹೈಕೋರ್ಟ್ ಮೊರೆ ಹೋಗಿದ್ದರಿಂದ ಈ ಹಿಂದೆ ಹುಬ್ಬಳ್ಳಿ ಅಂಕೋಲಾ ರೈಲ್ವೆ ಯೋಜನೆಯಿಂದ ಆಗುವ ಪರಿಸರದ ಹಾನಿ ಕುರಿತು ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹತ್ತು ವಾರದೊಳಗೆ ತಿರ್ಮಾಣ ಕೈಗೊಳ್ಳುವಂತೆ ನಿರ್ದೇಶನ ನೀಡಿ ಆದೇಶಿತ್ತು. ಆದರೆ ಈ ಅವಧಿ ಮಂಗಳವಾರಕ್ಕೆ ಮುಕ್ತಾಯವಾಗಿದ್ದು, ವನ್ಯಜೀವಿ ಮಂಡಳಿ ಮಾತ್ರ ಇನ್ನು ವರದಿ ಸಲ್ಲಿಸಿರಲಿಲ್ಲ. ಅಲ್ಲದೇ ಹೈಕೋರ್ಟ್ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುವ ಸಂದರ್ಭದಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯವರು ಮತ್ತೆ ನಾಲ್ಕು ವಾರದ ಗಡುವನ್ನು ಬಯಸಿದ್ದ ಹಿನ್ನಲೆಯಲ್ಲಿ ವನ್ಯಜೀವಿ ಮಂಡಳಿಯವರಿಂದ ವರದಿ ಒಪ್ಪಿಸಲು ಮತ್ತೆ ನಾಲ್ಕು ವಾರ ಹೈಕೋರ್ಟ್ ಗಡುವು ನೀಡಿ ಮಂಗಳವಾರ ಆದೇಶಿಸಿದೆ.
ನಮ್ಮ ಪರ ವರದಿ ಸಲ್ಲಿಸುವ ವಿಶ್ವಾಸವಿದೆ: ರಾಜೀವ್ ಗಾಂವಕರ್: ಮುಂದಿನ ನಾಲ್ಕು ವಾರದಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಸಂಬಂಧ ರಾಷ್ಟ್ರೀಯ ವನ್ಯಜೀವಿ ಮಂಡಳಿ ವರದಿ ಸಲ್ಲಿಸಲಿದ್ದು ನೂರಕ್ಕೆ ನೂರರಷ್ಟು ನಮ್ಮ ಪರ ವರದಿ ಸಲ್ಲಿಸುವ ವಿಶ್ವಾಸವಿದೆ ಎಂದು ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿ ಕಾರ್ಯದರ್ಶಿ ರಾಜೀವ್ ಗಾಂವಕರ್ ಅಭಿಪ್ರಾಯ ಪಟ್ಟಿದ್ದಾರೆ.
ವನ್ಯಜೀವಿ ಯೋಜನೆ ಅನುಷ್ಟಾನ ಸಂಬಂಧ ನಾವು ನ್ಯಾಯಾಲಯದ ಮೆಟ್ಟಿಲನ್ನ ಏರಿದ್ದು ವನ್ಯಜೀವಿ ಮಂಡಳಿಗೆ ವರದಿ ನೀಡಲು ಈ ಹಿಂದೆ ಹತ್ತು ವಾರ ಗಡುವನ್ನ ಕೊಡಲಾಗಿತ್ತು. ಆದರೆ ಅವರು ಮತ್ತೆ ನಾಲ್ಕು ವಾರ ಸಮಯಾವಕಾಶ ಕೇಳಿದ್ದರಿಂದ ಹೈಕೋರ್ಟ್ ಸಮಯಾವಕಾಶ ನೀಡಿದೆ.
ಯೋಜನೆ ಜಾರಿಯಾದರೆ ಉತ್ತರ ಕನ್ನಡ ಜಿಲ್ಲೆ ಸಾಕಷ್ಟು ಅಭಿವೃದ್ದಿಯಾಗಲಿದ್ದು ಶೀಘ್ರದಲ್ಲೇ ಜಾರಿಯಾಗಬೇಕು ಎನ್ನುವುದು ನಮ್ಮ ಪ್ರಮುಖ ಉದ್ದೇಶವಾಗಿದ್ದು ವನ್ಯಜೀವಿ ಮಂಡಳಿ ನಮ್ಮ ಪರ ಪೂರಕವಾಗಿ ವರದಿ ನೀಡುವ ವಿಶ್ವಾಸವಿದೆ ಎಂದಿದ್ದಾರೆ.