ಯಲ್ಲಾಪುರ: ಅಂಕೋಲಾ- ಹುಬ್ಬಳ್ಳಿ ರೈಲ್ವೇ ಯೋಜನೆ ಇನ್ನೂ ವಿಳಂಬವಾದರೆ ಯೋಜನೆಯ ಅನುಷ್ಟಾನವೇ ಬಹು ಕಷ್ಟವಾದೀತು. ಅದಕ್ಕಾಗಿ ತಜ್ಞರನ್ನು ಸೇರಿಸಿ, ಸಾಧಕ-ಬಾಧಕಗಳ ಕುರಿತು ಚರ್ಚಿಸಿ ಹೊರಾಟದ ರೂಪುರೇಷೆಯನ್ನು ಮಾಡಲು ಆ.13ರಂದು ಬೆಳಿಗ್ಗೆ 10ಕ್ಕೆ ಎಪಿಎಂಸಿ ಆವಾರದ ಅಡಿಕೆ ಭವನದಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಹೇಳಿದರು.
ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಅಭಯಾರಣ್ಯದ ತಾಲೂಕಾದ ದಾಂಡೇಲಿಯಲ್ಲಿ ರೈಲ್ವೇ ಇದೆ. ತಾಳಗುಪ್ಪಾ, ಶಿರಸಿ, ಹಾವೇರಿ ರೈಲ್ವೆ ಯೋಜನೆಯ ಸಮೀಕ್ಷೆಗೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಕರಾವಳಿಯುದ್ದಕ್ಕೂ ರೈಲ್ವೆಯಿದೆ ಇವು ಪಶ್ಚಿಮ ಘಟ್ಟ ವ್ಯಾಪ್ತಿಗೆ ಬರುತ್ತಿಲ್ಲವೆ, ಈ ಯಾವ ತಾಲೂಕಿನಲ್ಲಿಯೂ ಪರಿಸರ ನಾಶವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಯೋಜನೆಗೆ ಬೆಂಬಲ ನೀಡಿದ್ದರೂ, ಅದು ತಾಂತ್ರಿಕ ಕಾರಣದಿಂದಾಗಿ ನೆನೆಗುದ್ದಿಗೆಗೆ ಬಿದ್ದಿದೆ. ಶತಮಾನಗಳಷ್ಟು ಹಿಂದಿನದು ಯೋಜನೆಯನ್ನು ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಕಾಮಗಾರಿಯ ಶಂಕುಸ್ಥಾಪನೆ ಮಾಡಿದ್ದರು. ಇಂತಹ ಮಹತ್ವಾಕಾಂಕ್ಷಿ ಯೋಜನೆಯನ್ನು ಕಾಣದ ಕೈಗಳ ಪ್ರಭಾವಿಗಳು ಪರಿಸರದ ನೆಪವೊಡ್ಡಿ ಜಾರಿಯಾಗದಂತೆ ತಡೆದಿದ್ದಾರೆ. ಪ್ರಾರಂಭದಲ್ಲಿ ಈ ಕಾಮಗಾರಿಯನ್ನು 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು, ಇಂದು ಅದರ ಯೋಜನಾ ವೆಚ್ಚ 3750 ಕೋಟಿ ರೂ.ಗಳಿಗೇರಿದೆ ಎಂದರು.
ಸರ್ಕಾರಗಳು ನೇಮಿಸಿದ ವಿಜ್ಞಾನಿಗಳು ತಂಡ 6 ತಿಂಗಳುಗಳ ಕಾಲ ಅಧ್ಯಯನ ನಡೆಸಿ, ಯೋಜನೆಯ ಸಾಧಕ-ಬಾಧಕಗಳ ಕುರಿತು ಸರ್ಕಾರಕ್ಕೆ ವರದಿ ಒಪ್ಪಿಸಿದೆ. ಅದರಲ್ಲಿ ಈ ಯೋಜನೆಯಿಂದ ಪರಿಸರಕ್ಕೆ, ಪ್ರವಾಸೋದ್ಯಮಕ್ಕೆ ಅತೀ ಹೆಚ್ಚು ಅನುಕೂಲವಾಗಲಿದೆ. ದಿನವೊಂದಕ್ಕೆ ಈ ಪ್ರದೇಶದಲ್ಲಿ ಹಾದುಹೋಗಿರುವ ಹೆದ್ದಾರಿಯಲ್ಲಿ ಸಮನಚರಿಸುವ 8 ರಿಂದ 10 ಸಾವಿರ ವಾಹನಗಳು ಉಗುಳುವ ಹೊಗೆ ಅರಣ್ಯ ನಾಶಕ್ಕಿಂತಲೂ ದ್ವಿಗುಣ ಪ್ರಮಾಣದ ವಾಯುಮಾಲಿನ್ಯವನ್ನು ಉಂಟುಮಾಡುತ್ತದೆ. ಅಲ್ಲದೇ ಕೆಲವೇ ವರ್ಷಗಳಲ್ಲಿ ಈ ಹೆದ್ದಾರಿ ಚತುಷ್ಪತವಾಗುವ ಹಂತದಲ್ಲಿದೆ ಮತ್ತು ತಾಳಗುಪ್ಪ-ಖಾನಾಪುರ, ಬಂಕಾಪುರ-ಕೈಗಾ ಇವು ಕೂಡಾ ರಾಷ್ಟ್ರಿಯ ಹೆದ್ದಾರಿಯಾಗಿದೆ. ಇವುಗಳಿಂದ ಪರಿಸರ ಹಾನಿಯಾಗಲಿದೆ. ಈ ದೃಷ್ಟಿಯಿಂದ ಸರ್ಕಾರ, ಜನ ಪ್ರತಿನಿಧಿಗಳು ಈ ಕುರಿತು ಗಂಭಿರವಾಗಿ ಚಿಂತಿಸಿ, ಯೋಜನೆಯನ್ನು ಕೂಡಲೆ ಜಾರಿಗೊಳಿಸಲು ಮುಂದಾಗಬೇಕೆಂದು ಆಗ್ರಹಿಸಿದರು.
ಹೈಕೋರ್ಟ್ ಆದೇಶದಂತೆ ಕೇಂದ್ರ ಪರಿಸರ ಮಂಡಳಿಯ ತೀರ್ಪನ್ನು ನಿರೀಕ್ಷಿಸಲಾಗುತ್ತಿದೆ, ನಮ್ಮ ಪರವಾಗಿ ತೀರ್ಪು ಬಾರದಿದ್ದರೆ. ರಸ್ತೆ ತಡೆ ಮೂಲಕ ಉಗ್ರ ಹೋರಾಟಕ್ಕೆ ಸಿದ್ದರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು. ಈ ಯೋಜನೆ ವಿರೋಧಿಸುವವರಿಗೆ ತಜ್ಞರ ಮೂಲಕ ಮಾಹಿತಿ ನೀಡುತ್ತೇವೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಬೀರಣ್ಣ ನಾಯಕ ಮೊಗಟಾ, ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಶಂಕರ ಭಟ್ಟ ತಾರೀಮಕ್ಕಿ, ಕೆ.ಎಸ್.ಭಟ್ಟ, ವಿನೋದ ತಳೇಕರ್, ಆರ್.ಜಿ.ಭಟ್ಟ ಮತ್ತಿತರರು ಇದ್ದರು.