ಗೋಕರ್ಣ: ದೇವರು, ಗುರು, ತಂದೆ- ತಾಯಿಯ ಕಾರುಣ್ಯ ನಮ್ಮ ಜೀವನಕ್ಕೆ ಆಧಾರ. ಭಗವತ್ಕಾರುಣ್ಯವೇ ಜಗತ್ತಿಗೆ ಆಧಾರ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಗುರುವಾರ ಆಶೀರ್ವಚನ ನೀಡಿದ ಅವರು, ಬಾಲ್ಯದಲ್ಲಿ ಅಸಹಾಯಕ ಸ್ಥಿತಿಯಲ್ಲಿರುವಾಗ ತಂದೆ ತಾಯಿಯ ಕರುಣೆ ನಮ್ಮನ್ನು ಬೆಳೆಸುತ್ತದೆ. ಅಂತೆಯೇ ಗುರು ನೀಡಿದ ಜ್ಞಾನದ ಬೆಳಕು ಇಡೀ ಬದುಕಿನಲ್ಲಿ ನಮಗೆ ದಾರಿದೀಪ. ವಿದ್ಯೆಯಿಂದ ಬರುವ ಜ್ಞಾನ ನಮ್ಮ ಇಡೀ ಬದುಕಿಗೆ ದಾರಿದೀಪ. ಆದರೆ ಅನ್ನ- ಆಹಾರದಿಂದ ನಮಗೆ ಸಿಗುವ ತೃಪ್ತಿ ಕ್ಷಣಿಕ ಎಂದು ಅಭಿಪ್ರಾಯಪಟ್ಟರು.
ಬದುಕಿಗೆ ಕರುಣೆಯೇ ನಮ್ಮ ಬದುಕಿಗೆ ಆಧಾರ. ಈಶ್ವರನ ಕರುಣೆಯಿಂದಲೇ ನಾವೆಲ್ಲರೂ ಇದ್ದೇವೆ. ‘ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನ, ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ರಾಮನಾಥ’ ಎಂದು ದೇವರ ದಾಸಿಮಯ್ಯ ವಚನದಲ್ಲಿ ಬಣ್ಣಿಸಿದ್ದಾನೆ. ಈ ವಚನದ ಹಿಂದಿರುವುದು ದೇವರ ಕಾರುಣ್ಯದ ಬಣ್ಣನೆ ಎಂದರು.
ಗುರು, ದೇವರು, ತಾಯಿ- ತಂದೆಯ ಕರುಣೆಯ ಋಣವನ್ನು ನಾವ್ಯಾರೂ ತೀರಿಸಲಾಗದು; ನಾವು ಬದುಕಿನಲ್ಲಿ ತಪ್ಪು ಮಾಡಿದ ಬಳಿಕವಂತೂ ಕರುಣೆಯಿಂದಲೇ ಬದುಕುತ್ತೇವೆ. ಜೀವನದಲ್ಲಿ ತಪ್ಪು ಮಾಡದವನು ಯಾರೂ ಇಲ್ಲ; ತಪ್ಪು ಮಾಡದವರು ಇಲ್ಲಿಗೆ ಬರುವುದೇ ಇಲ್ಲ; ಪಾಪ- ಪುಣ್ಯ ಮಾಡಿದವರು ಮಾಡಿದವರು ಮಾತ್ರ ಮನುಷ್ಯ ಜನ್ಮ ಪಡೆಯುತ್ತಾರೆ. ಆದ್ದರಿಂದ ಎಲ್ಲರ ಬದುಕಿಗೂ ಕರುಣೆ ಆಧಾರ ಎಂದು ವಿಶ್ಲೇಷಿಸಿದರು.
ಅವತಾರ ಪುರುಷರು ಕೂಡಾ ಭುವಿಯನ್ನು ಉದ್ಧರಿಸುವ ಕಾರುಣ್ಯದಿಂದಲೇ ಅವತಾರವೆತ್ತಿ ಬರುತ್ತಾರೆ. ತನಗೆ ಕಷ್ಟವಾದರೂ ಬೇರೊಬ್ಬರ ಕಷ್ಟವನ್ನು ಪರಿಹರಿಸಲು ಯಾವ ಇಚ್ಛೆ ನಮ್ಮಲ್ಲಿ ಉಂಟಾಗುತ್ತದೆಯೋ ಅದೇ ದಯೆ ಅಥವಾ ಕರುಣೆ. ಬದುಕಿನಲ್ಲಿ ಕರುಣೆ ಇಲ್ಲದಿದ್ದರೆ ಏನಿದ್ದರೂ ನಿಷ್ಪಲ; ಕರುಣೆ ಎನ್ನುವುದು ಪ್ರೇಮದ ಪತ್ನಿ ಇದ್ದಂತೆ. ಪ್ರೇಮ- ದಯೆ ಎರಡು ಉನ್ನತ ಭಾವಗಳು. ದೇವರಿಗೆ ನಮ್ಮ ಮೇಲೆ ದಯೆ ಇರುವುದಕ್ಕೆ ಮುಖ್ಯ ಕಾರಣವೇ ಮನುಷ್ಯರ ಬಗೆಗಿನ ಪ್ರೀತಿ. ಪ್ರೇಮ ಇರುವಲ್ಲಿ ದಯೆ ಇರುತ್ತದೆ ಎಂದು ವಿವರಿಸಿದರು.
ಎಲ್ಲ ಜೀವಗಳಲ್ಲಿ ದೇವರೇ ಇರುತ್ತಾನೆ ಎಂಬ ಭಾವವೊಂದಿದ್ದರೆ ನಾವು ಯಾರಿಗೂ ನೋವು ಮಾಡುವುದಿಲ್ಲ. ಯಾರನ್ನೇ ನೋಯಿಸಿದರೂ ನಾವು ದೇವರನ್ನು ನೋಯಿಸಿದಂತಾಗುತ್ತದೆ. ನಮಗೆ ಹೇಗೆ ನಮಗೆ ಇಷ್ಟವೋ ಎಲ್ಲ ಜೀವವೂ ಹಾಗೆಯೇ ಎಂಬ ಭಾವ ಇದ್ದರೆ ಸರ್ವತ್ರವೂ ದಯಾಭಾವ ಮೂಡುತ್ತದೆ ಎಂದು ಬಣ್ಣಿಸಿದರು.
ಹೊನ್ನಾವರದ ವಾಗ್ದೇವಿ ಭಜನಾ ಮಂಡಳಿಯಿAದ ಭಜನಾ ಸೇವೆ ನಡೆಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ರಾಮತಾರಕ ಹವನ, ರುದ್ರಹೋಮ ನೆರವೇರಿಸಲಾಯಿತು.