ಕಾರವಾರ: ಕರ್ನಾಟಕ ರಾಜ್ಯ ಸರಕಾರವು ಪ್ರಕಟಪಡಿಸಿದ ದಿನಗೂಲಿ ನೌಕರರ ಕನಿಷ್ಟ ವೇತನ ಪರಿಷ್ಕರಣೆ ನಾಡಿನ ಕೋಟ್ಯಾಂತರ ಶೋಷಿತ ವರ್ಗದ ದಿನಗೂಲಿ ನೌಕರರಿಗೆ ಸರಕಾರ ನೀಡಿದ ಮತ್ತೊಂದು ಹೊಡೆತ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ಶಂಭು ಶೆಟ್ಟಿ ಹೇಳಿದ್ದಾರೆ.
ನಾಲ್ಕು ವರ್ಷದ ನಂತರ ಪರಿಷ್ಕರಿಸಲ್ಪಟ್ಟ ದಿನಗೂಲಿ ನೌಕರರ ಕನಿಷ್ಟ ವೇತನ ಕಾನೂನು ಬಾಹಿರ ಮತ್ತು ವಿವೇಚನಾ ರಹಿತವಾಗಿದೆ. ಈ ಹಿಂದೆ ಸರಕಾರ ಪ್ರಕಟಪಡಿಸಿದ ಕರಡು ಪ್ರತಿಯಲ್ಲಿದ್ದ ಕುಂದು- ಕೊರತೆಗಳನ್ನು ರಾಜ್ಯದ ನುರಿತ ಕಾರ್ಮಿಕ ಮುಖಂಡರುಗಳು ಕಾರ್ಮಿಕ ಮಂಡಳಿಯಲ್ಲಿ ಸರಕಾರದ ಗಮನಕ್ಕೆ ತಂದು, ದಿನಗೂಲಿ ನೌಕರರಿಗೆ ಕನಿಷ್ಠ 30%ರಷ್ಟು ದಿನಗೂಲಿ ಹೆಚ್ಚಳ ಮಾಡಿ ಪರಿಷ್ಕರಣೆ ಮಾಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿತ್ತು. ಆದರೆ ಸರಕಾರ ತಜ್ಞರ ಸಲಹೆಯನ್ನು ತಿರಸ್ಕರಿಸಿ ಕರಡು ಪ್ರತಿಯಲ್ಲಿದ್ದಂತೆ ಯಥಾವತ್ತಾಗಿ ಅಂತಿಮ ಪರಿಷ್ಕರಣಾ ಪಟ್ಟಿ ತಯಾರಿಸಿ ಅಧಿಕೃತವಾಗಿ ಘೋಷಿಸಿ ತಾನು ಕಾರ್ಮಿಕ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕಾರ್ಮಿಕ ಮುಖಂಡರು ಇವತ್ತಿನ ಬೆಲೆ ಏರಿಕೆ ಮತ್ತು ಗ್ರಾಹಕ ಬೆಲೆ ಸೂಚ್ಯಂಕ ಮುಂದಿಟ್ಟುಕೊAಡು ಸರಕಾರವು ದಿನಗೂಲಿ ಕಾರ್ಮಿಕರಿಗೆ ಕನಿಷ್ಠ 30% ದಿನಗೂಲಿ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದು, ಸರಕಾರ ಕೇವಲ 10% ಕನಿಷ್ಟ ಕೂಲಿ ಹೆಚ್ಚಿಸಿ ಕಾರ್ಮಿಕರಿಗೆ ಮರ್ಮಾಘಾತ ನೀಡಿದೆ ಎಂದಿದ್ದಾರೆ.
ವಾಸ್ತವವಾಗಿ ಕನಿಷ್ಟ ವೇತನ ಹೆಚ್ಚಿಸುವ ಮೊದಲು ರಾಜ್ಯಾದ್ಯಂತ ಆಹಾರ, ಉಡುಪು ಮತ್ತು ವಾಸದ ಮನೆ ಈ ಕುರಿತು ಸಮೀಕ್ಷೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಬೇಕಾಗಿದೆ. ಈ ಕುರಿತು ಕಾರ್ಮಿಕ ಮುಖಂಡರು ಕಾರ್ಮಿಕ ಮಂಡಲಿಯಲ್ಲಿ ಸಲಹೆಯನ್ನೂ ನೀಡಿದ್ದರು. ಆದರೆ ಇದೊಂದು ಶ್ರಮದಾಯಕ ಕೆಲಸ ಮತ್ತು ಅಪಾರ ಮಾನವ ಸಂಪನ್ಮೂಲ ಬೇಕಾಗುತ್ತದೆ ಎಂಬ ನೆಪ ಒಡ್ಡಿದ್ದ ಸರಕಾರ ತಮ್ಮ ಮೂಗಿನ ನೇರಕ್ಕೇ ಸರಿಯಾಗಿ ದಿನಗೂಲಿ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಿಸಿದೆ. 2016ರಲ್ಲಿ ಕಾಂಗ್ರೆಸ್ ಸರಕಾರ ರಾಜ್ಯದ ಹದಿನಾರು ಕೇಂದ್ರಗಳಲ್ಲಿ ಸರ್ವೇ ನಡೆಸಿ ಈ ಹಿಂದಿನ ಕನಿಷ್ಟ ವೇತನ ಘೋಷಣೆ ಮಾಡಿತ್ತು. ಇಂದಿನ ಸರಕಾರದ ಈ ಕಾರ್ಮಿಕ ವಿರೋಧಿ ಕನಿಷ್ಟ ವೇತನ ಪರಿಷ್ಕರಣೆ ರಾಜ್ಯದ ಸುಮಾರು ಎರಡು ಕೋಟಿ ದಿನಕೂಲಿ ಕಾರ್ಮಿಕರಿಗೆ ಸರಕಾರ ನಡೆಸಿದ ಆರ್ಥಿಕ ದೌರ್ಜನ್ಯ ಎಂದು ಅವರು ಆಪಾದನೆ ಮಾಡಿದ್ದಾರೆ.