ಶಿರಸಿ: ‘ಎನ್.ಡಿ.ಎ. ಅಧಿಕಾರಾವಧಿಯಲ್ಲಿ ದೇಶದ ಉನ್ನತ ಹುದ್ದೆಗಳನ್ನು ಉತ್ತರ ಭಾರತದವರಿಗೆ ನೀಡಲಾಗಿದೆ. ದಕ್ಷಿಣ ಭಾರತದವರಿಗೆ ಪ್ರಾತಿನಿಧ್ಯ ಸಿಗುವಂತೆ ಮಾಡಲು ಮತ ಯಾಚಿಸಿದ್ದೇನೆ’ ಎಂದು ಯು.ಪಿ.ಎ. ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವ ಹೇಳಿದರು.
ಇಲ್ಲಿನ ಪತ್ರಕರ್ತರೊಂದಿಗೆ ಮಂಗಳವಾರ ಆನ್ ಲೈನ್ ಮೂಲಕ ಸುದ್ದಿಗೋಷ್ಠಿ ನಡೆಸಿದ ಅವರು, ‘ಸುಮಾರು 20 ಪಕ್ಷಗಳು ಈಗಾಗಲೆ ಬೆಂಬಲಸಲು ನಿರ್ಧರಿಸಿವೆ. ಮಮತಾ ಬ್ಯಾನರ್ಜಿ ಬುಧವಾರ ದೆಹಲಿಗೆ ಭೇಟಿ ನೀಡಲಿದ್ದು ಈ ವೇಳೆ ಅವರ ಜತೆ ಚರ್ಚಿಸಲಿದ್ದೇನೆ. ಇನ್ನೂ ನಾಲೈದು ಪಕ್ಷಗಳು ಬೆಂಬಲಿಸಲು ನಿರ್ಣಯ ಕೈಗೊಳ್ಳಲಿವೆ’ ಎಂದರು.’ಬಿಜೆಪಿ ಅಧಿಕಾರಾವಧಿಯಲ್ಲಿ ಸಂಸತ್‌ನಲ್ಲಿ ಚರ್ಚೆಗೆ ಅವಕಾಶ ಸಿಗುತ್ತಿಲ್ಲ. ನೂರಕ್ಕೂ ಹೆಚ್ಚು ಬಿಜೆಪಿ ಸಂಸದರು ಅಸಮಾಧಾನಗೊಂಡಿದ್ದಾರೆ. ಅವರೆಲ್ಲರೂ ಬೆಂಬಲಿಸುವ ವಿಶ್ವಾಸವಿದೆ’ ಎಂದರು.
‘ಮೂರು ವಾರದಿಂದ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಬೆಲೆ ಏರಿಕೆ, ಧರ್ಮ ಜಗಳದ ಕುರಿತು ಚರ್ಚೆಗೆ ಅವಕಾಶ ಕೋರಿದ್ದರೂ ಅವಕಾಶ ನೀಡಲಾಗುತ್ತಿಲ್ಲ. ಜನ ಸಂಕಷ್ಟದಲ್ಲಿರುವ ಹೊತ್ತಲ್ಲಿ ಸರ್ಕಾರ ಕ್ರೀಡೆಗೆ ಪ್ರಾತಿನಿಧ್ಯ ನೀಡಲು ಮುಂದಾಗಿದೆ’ ಎಂದು ಆರೋಪಿಸಿದರು.