ಶಿರಸಿ: ಭೈರುಂಬೆಯ ಕಲರವ ಸೇವಾ ಸಂಸ್ಥೆಯು ಸಾಮಾಜಿಕ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಕಳೆದ 3 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ಕಳೆದ ಕೆಲ ತಿಂಗಳ ಹಿಂದೆ ಶಿರಸಿ-ಯಲ್ಲಾಪುರ ಮುಖ್ಯ ಹೆದ್ದಾರಿಯಲ್ಲಿ ಗಡಿಗೆಹೊಳೆ ಕ್ರಾಸ್‌ನಿಂದ ಭೈರುಂಬೆಗೆ ತೆರಳುವ ಮಾರ್ಗ ಮಧ್ಯೆ ಹಾಗೂ ಸಹಸ್ರಲಿಂಗದ ತಿರುವಿನ ಬಳಿ ಉಂಟಾದ ಅಪಾಯಕಾರಿ ಹೊಂಡಗಳನ್ನು ಕಲರವ ಸೇವಾ ಸಂಸ್ಥೆಯ ವತಿಯಿಂದ ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಆದರೆ ಪುನಃ ಮತ್ತದೇ ಸಮಸ್ಯೆ ತಲೆದೋರಿದ್ದರಿಂದ 3 ಬಾರಿ ಕಲರವ ಸೇವಾ ಸಂಸ್ಥೆಯ ಸದಸ್ಯರು ಮಾರಣಾಂತಿಕವಾಗಿ ಪರಿಣಮಿಸಿರುವ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದಾರೆ. ಆದರೆ ಸಮಸ್ಯೆ ಶಾಶ್ವತ ಪರಿಹಾರ ಕಂಡಿಲ್ಲ. ಇದೀಗ ಮತ್ತೆ ರಸ್ತೆಯ ಮೇಲಿನ ಹೊಂಡಗಳು ಮೃತ್ಯುಕೂಪಗಳಾಗಿ ಪರಿಣಮಿಸಿವೆ.
ಹಲವು ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ, ನಡೆಯುತ್ತಿವೆ. ದೊಡ್ಡ ವಾಹನಗಳು ಹೊಂಡ ತಪ್ಪಿಸಲು ಹೋಗಿ ಅಪಘಾತವಾಗುವ ಸಂಭವವೂ ಇದೆ. ಆದರೆ ಸಂಬಂಧಿಸಿದ ಇಲಾಖೆ, ಅಧಿಕಾರಿಗಳು ಈ ಕುರಿತು ಗಮನ ಹರಿಸದೇ ಇರುವುದು ದುರಂತ. ಇದನ್ನು ತ್ವರಿತವಾಗಿ ದುರಸ್ತಿಗೊಳಿಸಬೇಕಾದ್ದು ಇಲಾಖೆಯ ಕರ್ತವ್ಯ, ಆದರೆ ಇಲಾಖೆಯು ಜವಾಬ್ದಾರಿಯನ್ನು ಮರೆತು ಕುಳಿತಿರುವಂತೆ ತೋರುತ್ತಿದೆ.
ಈ ನಿಟ್ಟಿನಲ್ಲಿ ಸಂಬಂಧಿಸಿದವರು ಆಗಸ್ಟ್ 15, 2022ರ ಒಳಗೆ ಕ್ರಮ ತೆಗೆದುಕೊಳ್ಳುವಂತೆ ಕಲರವ ಸೇವಾ ಸಂಸ್ಥೆ ವಿನಂತಿಸಿಕೊಂಡಿದೆ. ಇಲ್ಲವಾದಲ್ಲಿ ಕಲರವ ಸೇವಾ ಸಂಸ್ಥೆ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಊರ ನಾಗರಿಕರೆಲ್ಲ ಸೇರಿ ಆಗಸ್ಟ್ 15ರಂದು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲು ನಿರ್ಧಸಿದೆ. ಜನರ ಜೀವದ ಪ್ರಶ್ನೆ ಇದಾಗಿದ್ದು ತಕ್ಷಣದಲ್ಲಿ ಕ್ರಮ ವಹಿಸುವಂತೆ ಸಂಬಂಧಿಸಿದ ಇಲಾಖೆ ಹಾಗೂ ಅಧಿಕಾರಿಗಳಿಗೆ ಕಲರವ ಸೇವಾ ಸಂಸ್ಥೆ ಮನವಿ ಮಾಡಿದೆ.