ದಾಂಡೇಲಿ: ನಗರದ ಕೋಗಿಲಬನದಲ್ಲಿ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯ ಸಹಕಾರದಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತವಾದ ಹಿಂದೂ ರುದ್ರಭೂಮಿ ಕಟ್ಟಡದ ವಿದ್ಯುಕ್ತ ಲೋಕಾರ್ಪಣೆಯು ಜರುಗಿತು.
ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯು ದಾನಿಗಳ ನೆರವಿನೊಂದಿಗೆ ಹಿಂದೂ ರುದ್ರಭೂಮಿ ಕಟ್ಟಡವನ್ನು ನಿರ್ಮಿಸಲು ಮುಂದಡಿಯಿಟ್ಟು, ಕಾಮಗಾರಿಯನ್ನು ಆರಂಭಿಸಿತ್ತು. ನೆಲ ಸಮತಟ್ಟು, ಅಡಿಪಾಯ ಹಾಗೂ ಏಳು ಅಡಿ ಎತ್ತರಕ್ಕೆ ಕಾಲಂ ಏರಿಸಿದ ಬಳಿಕ ಮುಂದೆ ಕಾಮಗಾರಿ ನಡೆಸಲು ಕಷ್ಟಸಾಧ್ಯವಾದ ಸಂದರ್ಭದಲ್ಲಿ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ನೆರವಿಗೆ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆ ಬಂದಿತ್ತು .
ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿಯವರು ವಿಶೇಷವಾದ ಮುತುವರ್ಜಿಯನ್ನು ವಹಿಸಿ, ಕಾಗದ ಕಾರ್ಖಾನೆಯ ಆಡಳಿತ ಮಂಡಳಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದ ಪರಿಣಾಮವಾಗಿ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆ ಸ್ಥಗಿತಗೊಂಡಿದ್ದ ರುದ್ರಭೂಮಿ ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ತನ್ನ ಸಿ.ಎಸ್.ಆರ್ ಯೋಜನೆಯ ಮೂಲಕ ಹೊತ್ತು ಕಾಮಗಾರಿಯನ್ನು ಪೂರ್ತಿಗೊಳಿಸಿದೆ. ಹಿಂದೂ ರುದ್ರಭೂಮಿ ಕಟ್ಟಡ ನಿರ್ಮಾಣದ ಕಾರ್ಯವನ್ನು ಪ್ರಕಾಶ ಬೇಟ್ಕರ್ ಅವರ ಅಧ್ಯಕ್ಷತೆಯ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಆರಂಭಿಸಿತ್ತಾದರೂ, ಬಹುತೇಕ ಕಾಮಗಾರಿಯನ್ನು ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯೆ ಮಾಡಿ ಮುಗಿಸಿ ಕೊಟ್ಟು, ಇನ್ನೂ ಅಲ್ಲಿ ಆಗಬೇಕಾದ ಮೂಲಸೌಕರ್ಯಗಳ ಜೋಡಣೆಗೂ ಅಗತ್ಯ ಕ್ರಮವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮುಂದಡಿಯಿಟ್ಟಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಇಲ್ಲಿ ಸಿಎಸ್‌ಆರ್ ಯೋಜನೆಯಡಿ ಕಾಮಗಾರಿಯನ್ನು ಕೈಗೆತ್ತಿಕೊಂಡ ಬಳಿಕ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿಯವರ ಜೊತೆ ಕಾರ್ಖಾನೆಯ ಅಧಿಕಾರಿಗಳಾದ ಸಂಜಯ್ ಹುಕ್ಕೇರಿಕರ, ಕೃಷ್ಣ ಕುಲಕರ್ಣಿ ಸೇರಿದಂತೆ ಮೊದಲಾದ ಅಧಿಕಾರಿಗಳು ಮತ್ತು ಗುತ್ತಿಗೆದಾರ ರಮೇಶ ನಾಯರ್ ಅವರು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಮಂಗಳವಾರ ಬೆಳಗ್ಗಿನಿಂದಲೆ ಹಿಂದೂ ರುದ್ರಭೂಮಿ ಕಟ್ಟಡದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನಡೆಸಿದ ಬಳಿಕ ಕಾಗದ ಕಾರ್ಖಾನೆಯ ಅಧಿಕಾರಿ ಕೃಷ್ಣ ಕುಲಕರ್ಣಿಯವರು ವಿದ್ಯುಕ್ತವಾಗಿ ಹಿಂದೂ ರುದ್ರಭೂಮಿಯನ್ನು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್, ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಕಾಶ ಬೇಟ್ಕರ್, ಸಮಿತಿಯ ಪ್ರಮುಖರುಗಳಾದ ವಿನಯ್.ಆರ್.ಗುನೆ, ಕೆ.ಸುಧಾಕರ ರೆಡ್ಡಿ, ಮಹೇಶ ನಾಗಪ್ಪ ನಾಯ್ಕ, ರವಿ.ಎಸ್.ಪಾವಸ್ಕರ್, ವಿಕ್ರಂ ಸೋಗಿ, ಅಶೋಕ್.ಆರ್ ಪಾಟೀಲ, ಅಶೋಕ್.ಜೆ.ಬೇಟ್ಕರ್, ರಾಜನ್.ಎಸ್.ಗೌಂಡಳ್ಕರ್, ಸುಭಾಷ್ ಭಟ್ ಹಾಗೂ ಮುಖಂಡರುಗಳಾದ ವಾಸುದೇವ ಪ್ರಭು, ದಿನೇಶ ವ್ಯಾಸ್, ಜನಾರ್ಧನ್, ದೇವೇಂದ್ರ ಹಂಸಾಗರ ಶೆಟ್ಟರ್, ಯು.ಎಸ್.ಪಾಟೀಲ, ಶಿವಾಜಿ ಬೇಟ್ಕರ್, ಜಯೇಶ ಬೇಟ್ಕರ್, ಪ್ರಭಾಕರ ಉಪ್ಪಾರ್, ರಾಮಪ್ಪ, ನವೀನ್ ಮೊದಲಾದವರು ಉಪಸ್ಥಿತರಿದ್ದರು.