ದಾಂಡೇಲಿ: ಕಳೆದ 41 ವರ್ಷಗಳಿಂದ ಕನ್ಯಾ ವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸುದೀರ್ಘ ಹಾಗೂ ಅಷ್ಟೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಲತಾ ಕೇಣಿಯವರು ನಿವೃತ್ತಿ ಹೊಂದಿದ್ದಾರೆ.
ಮೂಲತಃ ಅಂಕೋಲಾ ತಾಲೂಕಿನ ಕೇಣಿಯ ಅವರು, ಟಿಸಿಎಚ್ ಶಿಕ್ಷಣವನ್ನು ಪಡೆದು ಮುಂದೆ ಬೆಳಗಾವಿಯ ಬೆನನ್ ಸ್ಮಿತ್ ಕಾಲೇಜಿನಲ್ಲಿ ಸಿಪಿಎಡ್ ಶಿಕ್ಷಣವನ್ನು ಪಡೆದರು. ಶಿಕ್ಷಣವನ್ನು ಪಡೆದು ದಾಂಡೇಲಿಯ ಕನ್ಯಾ ವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ 1981ರಲ್ಲಿ ಕೆಲಸಕ್ಕೆ ಸೇರಿಕೊಂಡರು. ಇಲ್ಲಿ ಕೆಲಸ ಮಾಡುತ್ತಲೆ ಅಂಚೆ ತೆರಪಿನ ಮೂಲಕ ಮುಂದಿನ ಶಿಕ್ಷಣವನ್ನು ಮುಗಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಶಾಲೆಯ ಅದೆಷ್ಟೋ ವಿದ್ಯಾರ್ಥಿಗಳು ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿಯೂ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡುವಲ್ಲಿ ಪ್ರೇರಣೆಯಾದವರು. ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ಕನ್ಯಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಪುರಸ್ಕಾರ ಬರುವಂತಾಗಲೂ ಇವರ ಶ್ರಮ ಹೆಚ್ಚಿದೆ.
ಅದೆಷ್ಟೋ ಸಂಕಷ್ಟದಲ್ಲಿರುವ ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಿರುವುದು, ಬಟ್ಟೆ ಬರೆ ಕೊಡಿಸಿರುವುದು, ಬಡವರ ಮಕ್ಕಳ ಮದುವೆಗೆ ಸಹಾಯ ಹಸ್ತ ನೀಡಿರುವುದನ್ನು ಅವರು ಹೇಳದಿದ್ದರೂ, ಅವರಿಂದ ನೆರವು ಪಡೆದವರು ಇಂದು ಕೂಡ ನೆನಪು ಮಾಡುತ್ತಿದ್ದಾರೆ. ಬಲಗೈಯಲ್ಲಿ ಕೊಟ್ಟದ್ದು ಎಡಗೈ ಗೊತ್ತಾಗಬಾರದೆನ್ನುವ ನಿಲುವಿನ ಆದರ್ಶ ವ್ಯಕ್ತಿತ್ವದ ಲತಾ ಕೇಣಿಯವರ ನಿವೃತ್ತ ಜೀವನವು ಸುಖಕರವಾಗಿರಲೆನ್ನುವುದೆ ಈ ಬರಹದ ಪ್ರಾರ್ಥನೆ.