ಕಾರವಾರ: ವೀರಶೈವ- ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ (ಓ.ಬಿ.ಸಿ) ಪಟ್ಟಿಯಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಕಳೆದ 60 ವರ್ಷಗಳಿಂದ ವೀರಶೈವ – ಲಿಂಗಾಯತ ಸಮುದಾಯವನ್ನು ಇತರೇ ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿದೆಯಾದರೂ ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಇದರಿಂದ ಕೇಂದ್ರ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳು ಸಮಾಜಕ್ಕೆ ವಂಚಿತವಾಗುತ್ತಿದೆ. ನಮ್ಮ ಸಮುದಾಯ ಮಾತ್ರ ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗದಿರುವುದು ದುರದೃಷ್ಟಕರ ಸಂಗತಿ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ವೀರಶೈವ-ಲಿಂಗಾಯತ ಸಮುದಾಯವು ಬಹುತೇಕ ಕೃಷಿ ಮತ್ತು ಆಧಾರಿತ ಕಸುಬುಗಳನ್ನು ಅವಲಂಬಿಸಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವಾಗಿರುತ್ತದೆ. ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸೇರದೇ ಇರುವ ಕಾರಣ ನಮ್ಮ ಸಮುದಾಯದ ಜನರು ದಶಕಗಳಿಂದ ಕೇಂದ್ರ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಕೇಂದ್ರದ ನೇಮಕಾತಿ ಅವಕಾಶಗಳಿಂದ ವಂಚಿತರಾಗಿರುತ್ತಾರೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ಇತರೇ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಮತ್ತು ಈಗಾಗಲೇ ಕೇಂದ್ರದ ಓಬಿಸಿ ಪಟ್ಟಿಯಲ್ಲಿರುವ ಹಲವು ಸಮುದಾಯಗಳಿಗಿಂತಲೂ ವೀರಶೈವ- ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವೀರಶೈವ- ಲಿಂಗಾಯತ 16 ಉಪಪಂಗಡಗಳು ಮಾತ್ರ ಕೇಂದ್ರದ ಉಬಿಸಿ ಪಟ್ಟಿಯಲ್ಲಿದ್ದು, ಸೌಲಭ್ಯ ಪಡೆಯುತ್ತಿದ್ದಾರೆ.
ಜನಸಂಖ್ಯಾ ದೃಷ್ಟಿಯಿಂದ ಇವು ಅತಿ ಸಣ್ಣ ಉಪಪಂಗಡಗಳಾಗಿದ್ದು ಇನ್ನುಳಿದ ಬಹುತೇಕ ಉಪಪಂಗಡಗಳು ಕೇಂದ್ರದ ಓಬಿಸಿ ಪಟ್ಟಿಯಿಂದ ಹೊರಗುಳಿದಿರುವುದರಿಂದ ಒಟ್ಟು ಸಮಾಜಕ್ಕೆ ಸೌಲಭ್ಯ ದೊರೆಯುತ್ತಿಲ್ಲ. ಆದ್ದರಿಂದ ಇದೀಗ ಉಳಿದಿರುವ ಉಪಪಂಗಡಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಸೌಲಭ್ಯ ದೊರೆಯುವಂತೆ ಮಾಡಬೇಕು. ಒಂದೊಮ್ಮೆ ಶಿಫಾರಸ್ಸು ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುವುದಾಗಿ ಎಚ್ಚರಿಸಿದ್ದಾರೆ.
ಈ ವೇಳೆ ಮಹಾಸಭಾದ ಜಿಲ್ಲಾ ಉಸ್ತುವಾರಿ ಉಮೇಶ ಪಾಟೀಲ್, ಹಳಿಯಾಳ ತಾಲ್ಲೂಕಾ ಅಧ್ಯಕ್ಷ ಎಂ.ಬಿ ತೋರಣಗಟ್ಟಿ, ಯು.ಎಸ್ ಪಾಟೀಲ್, ವಿ.ಎಸ್. ಪಾಟೀಲ್, ನಂದಿಕೇಶ್ವರ ಮಠ, ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರರು ಇದ್ದರು.