ಕುಮಟಾ: ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಸಾಧಕ ಪ್ರೇಮಾನಂದ ಗಾಂವಕರ ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಾಲೇಜಿಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯ ಒದಗಿಸಿದ್ದಾರೆ ಎಂದು ಹಿರೇಗುತ್ತಿ ಹೈಸ್ಕೂಲ್ ಮುಖ್ಯಾಧ್ಯಾಪಕ ರೋಹಿದಾಸ ಎಸ್.ಗಾಂವಕರ ನುಡಿದರು.
ಹಿರೇಗುತ್ತಿ ಹೈಸ್ಕೂಲ್‌ನಲ್ಲಿ ನಡೆದ ಹಿರೇಗುತ್ತಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಪ್ರೇಮಾನಂದ ಗಾಂವಕರರವರ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಸಾಧ್ಯ ಅದಕ್ಕೆ ಪ್ರೇಮಾನಂದ ಗಾಂವಕರ ಅವರೇ ಸಾಕ್ಷಿ ಎಂದರು.
ಪ್ರಾಚಾರ್ಯ ಪ್ರೇಮಾನಂದ ಗಾಂವಕರ ಮಾತನಾಡಿ, ಯಾವ ವ್ಯಕ್ತಿ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಾನೆ ಅಂತಹ ವ್ಯಕ್ತಿಗಳಿಗೆ ಯಾವುದೇ ತೊಂದರೆ ಬರಲಾರದು ನಾವು ಮೊದಲು ಸರಿಯಾಗಿರಬೇಕು ಊರಿನವರ ಸಹಕಾರ, ಹೈಸ್ಕೂಲಿನ ಆಡಳಿತ ಮಂಡಳಿ, ವಿದ್ಯಾರ್ಥಿಗಳ ಪ್ರೀತಿ, ಹಿರೇಗುತ್ತಿ ಕಾಲೇಜನ್ನು ಇಷ್ಟು ಉತ್ತಮವಾಗಿಸಲು ಸಾಧ್ಯವಾಗಿದೆ ಎಂದರು.
ಶಿಕ್ಷಕ ವಿಶ್ವನಾಥ ಬೇವಿನಕಟ್ಟಿ ಮಾತನಾಡಿ, ಎಲ್ಲರಿಗೂ ಒಳ್ಳೆಯದನ್ನು ಬಯಸುವ ಹಿರಿ-ಕಿರಿಯರೊಂದಿಗೆ ವೃತ್ತಿ, ಬಾಂಧವರೊoದಿಗೆ ಸಹನೆ ಸೌಜನ್ಯದೊಂದಿಗೆ ಬೆರೆಯುವ ಪ್ರೇಮಾನಂದ ಅವರ ನಿವೃತ್ತಿಯ ಜೀವನ ಸುಖಕರವಾಗಿರಲಿ ಎಂದರು.
ಕಾರ್ಯಕ್ರಮದಲ್ಲಿ ಬಾಲಚಂದ್ರ ಹೆಗಡೆಕರ್, ನಾಗರಾಜ ನಾಯಕ, ಇಂದಿರಾ ನಾಯಕ, ಜಾನಕಿ ಗೊಂಡ, ಬಾಲಚಂದ್ರ ಅಡಿಗೋಣ, ಶಿಲ್ಪಾ ನಾಯಕ, ಮದನ ನಾಯಕ, ಕವಿತಾ ಅಂಬಿಗ, ಗೋಪಾಲಕೃಷ್ಣ ಗುನಗ, ಗೋವಿಂದ ನಾಯ್ಕ, ಉಪಸ್ಥಿತರಿದ್ದರು. ಎನ್.ರಾಮು ಹಿರೇಗುತ್ತಿ ಸ್ವಾಗತಿಸಿ ನಿರೂಪಣೆ ಮಾಡಿದರು. ಮಹಾದೇವ ಗೌಡ ವಂದಿಸಿದರು.
ಪ್ರೇಮಾನಂದ ಗಾಂವಕರಗೆ ಬೀಳ್ಕೊಡುಗೆ
