ದಾಂಡೇಲಿ: 60 ವರ್ಷಗಳ ಇತಿಹಾಸವಿರುವ ಡಿಲಕ್ಸ್ ಮೈದಾನವನ್ನು ಕಾಗದ ಕಾರ್ಖಾನೆಯ ಆಡಳಿತ ಮಂಡಳಿ ಕೆಡವಿ, ಅಲ್ಲಿ ನೆಡುತೋಪು ಮಾಡಲು ಮುಂದಾಗಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಮೈದಾನದಲ್ಲಿ ಅದೆಷ್ಟೋ ಪಂದ್ಯಾವಳಿಗಳು ನಡೆದಿವೆ. ಕ್ರೀಡಾಪಟುಗಳ ಕ್ರೀಡಾ ಬದುಕಿಗೆ ಸ್ಫೂರ್ತಿ ನೀಡಿದೆ. ಇಡೀ ಉತ್ತರ ಕರ್ನಾಟಕದಲ್ಲೆ ಹೆಸರುವಾಸಿಯಾದ ರಾಮಲೀಲೋತ್ಸವ ಕಾರ್ಯಕ್ರಮ ಇಲ್ಲಿ ನಡೆಯುತ್ತಿತ್ತು. ಇದೀಗ ಮೈದಾನ ಕೆಡವಲು ಹೊರಟಿರುವುದು ಸೇರಿದಂತೆ ಕಾಗದ ಕಾರ್ಖಾನೆಯ ಆಡಳಿತ ಮಂಡಳಿಯು ತೆಗೆದುಕೊಳ್ಳುವ ಜನ ವಿರೋಧಿ ಧೋರಣೆಯಿಂದ ಎಲ್ಲರು ಆಕ್ರೋಶಿತರಾಗಿದ್ದಾರೆ.
ಈ ನಿಟ್ಟಿನಲ್ಲಿ ಶುಕ್ರವಾರ ಕಾಗದ ಕಾರ್ಖಾನೆಯ ಡಿಲಕ್ಸ್ ಮೈದಾನದಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರುಗಳಾದ ಹನುಮಂತ ಕಾರ್ಗಿ, ಭರತ್ ಪಾಟೀಲ, ಭವರ್ ಸಿಂಗ್, ಪ್ರಮೋದ್ ಕದಂ ಅವರು ಕಾಗದ ಕಾರ್ಖಾನೆಯ ಈ ನಿರ್ಧಾರ ಸರಿಯಲ್ಲ. ಈ ಬಗ್ಗೆ ಈಗಾಗಲೆ ಜಂಟಿ ಸಂಧಾನ ಸಮಿತಿಯ ವತಿಯಿಂದ ಕಾಗದ ಕಾರ್ಖಾನೆಯ ಆಡಳಿತ ಮಂಡಳಿಗೆ ಲಿಖಿತ ಮನವಿ ನೀಡಲಾಗಿದೆ. ಕಾರ್ಖಾನೆಯ ಕರ‍್ಯನಿರ್ವಾಹಕ ನಿರ್ದೇಶಕರನ್ನು ಭೇಟಿಯಾಗಿ ವಿವರಿಸಿ, ಮನವಿ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಮೈದಾನವನ್ನು ಕೆಡವಿ ಪ್ಲಾಂಟೇಶನ್ ಮಾಡಬಾರದೆಂದು ಆಗ್ರಹಿಸಿದ್ದಾರೆ.