ಕಾರವಾರ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆಗೆ ಖಂಡಿಸಿ ಗುರುವಾರ ಆವೇಷಭರಿತರಾಗಿ ಸ್ವಪಕ್ಷದ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದ ಇಲ್ಲಿನ ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳು, ಶುಕ್ರವಾರ ತುರ್ತು ಸುದ್ದಿಗೋಷ್ಠಿ ನಡೆಸಿ ಕ್ಷಮಾಪಣೆ ಕೋರಿದ್ದಾರೆ.
ಪ್ರವೀಣ್ ಹತ್ಯೆ ಖಂಡಿಸಿ ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲೆಂದು ಜಿಲ್ಲಾಧಿಕಾರಿ ಕಚೇರಿಯೆದುರು ಸೇರಿದ್ದ ಬಿಜೆಪಿ ಗ್ರಾಮೀಣ ಮತ್ತು ನಗರ ಯುವಮೋರ್ಚಾ ಪದಾಧಿಕಾರಿಗಳು, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, 40 ಮಂದಿ ರಾಜೀನಾಮೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ, ನಗರ ಯುವಮೋರ್ಚಾ ಅಧ್ಯಕ್ಷ ಶುಭಂ ಕಳಸ, ಸರ್ಕಾರ ಹಿಂದೂ ಯುವಕರ ಈ ರೀತಿ ಹತ್ಯಾಕಾಂಡ ಮುಂದುವರಿದರೂ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದ್ದರು. ಆದರೆ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ನಿನ್ನೆ ಶಾಂತಿಯುತವಾಗಿ ನಡೆಯಬೇಕಿದ್ದ ಪ್ರತಿಭಟನೆಯಲ್ಲಿ ಆವೇಷಭರಿತರಾಗಿ ಮಾತನಾಡಿದೆವು. ಇದರಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ. ಹೀಗಾಗಿ ಮುಖ್ಯಮಂತ್ರಿಗಳು ಹಾಗೂ ಪಕ್ಷದ ನಾಯಕರುಗಳಲ್ಲಿ ಕ್ಷಮಾಪಣೆ ಕೋರುತ್ತೇವೆ ಎಂದು ತಿಳಿಸಿದ್ದಾರೆ.
ಹತ್ಯೆಯಾದ ಪ್ರವೀಣ್ ನಮ್ಮ ಬಿಜೆಪಿ ಕುಟುಂಬದವರು. ಒಂದೇ ಮನೆಯ ಮಕ್ಕಳಾದ ಕಾರಣ ನಮಗೆ ಆತನ ಹತ್ಯೆಯನ್ನು ಅರಗಿಸಿಕೊಳ್ಳಲಾಗಿಲ್ಲ. ಹೀಗಾಗಿ ನೋವಿನಲ್ಲಿ ಉಂಟಾದ ಆವೇಷದಲ್ಲಿ ನಿನ್ನೆ ಆಕ್ರೋಶಭರಿತರಾಗಿ ಮಾತನಾಡಿದೆವು. ಕುಟುಂಬದಲ್ಲಿ ಸಣ್ಣಪುಟ್ಟ ಗಲಾಟೆಗಳು ಇರುವುದೇ. ಹೀಗಾಗಿ ನಾವು ನಿನ್ನೆ ಆಕ್ರೋಶ ಭರಿತರಾಗಿ ಮಾಡಿದ್ದ ಗಲಾಟೆಯ ಕಾರಣ ಮನೆಯ ಮಕ್ಕಳಿಗೆ ನಾಯಕರುಗಳೆಲ್ಲ ಬುದ್ಧಿವಾದ ಹೇಳಿದ್ದಾರೆ. ಹೀಗಾಗಿ ನೀಡಿದ್ದ ರಾಜೀನಾಮೆಯನ್ನೂ ಹಿಂತೆಗೆದುಕೊಳ್ಳುತ್ತಿದ್ದೇವೆ. ನಾವು ಮಾಡಿದ ಒಂದು ಸಣ್ಣ ತಪ್ಪು ಪಕ್ಷಕ್ಕೆ ಬಹಳ ಮುಜುಗರ ತಂದಿದೆ. ಇನ್ನೆಂದು ಕೂಡ ಇಂಥ ತಪ್ಪನ್ನು ನಾವು ಮಾಡುವುದಿಲ್ಲ ಎಂದರು.
ಮುಖ್ಯಮಂತ್ರಿಗಳು ಜಿಲ್ಲೆಗೆ ಬಂದರೆ ಪ್ರತಿಭಟಿಸುತ್ತೇವೆ ಎಂದಿದ್ದೆವು. ನಿನ್ನೆ ನಾವು ಮನವಿ ಸಲ್ಲಿಸಿದ ಕೆಲ ಕ್ಷಣಗಳಲ್ಲೇ ಮುಖ್ಯಮಂತ್ರಿಗಳು ಪ್ರವೀಣ್ ಅವರ ಮನೆಗೆ ಭೇಟಿ ನೀಡಿ ಪರಿಹಾರ ನೀಡಿದ್ದಾರೆ. ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಆರೋಪಿತರುಗಳನ್ನು ಬಂಧಿಸಲಾಗಿದೆ. ಇದೀಗ ಎನ್‌ಐಗೆ ಪ್ರಕರಣವನ್ನು ವಹಿಸಲಾಗುತ್ತಿದೆ. ಹೀಗಾಗಿ ಮುಖ್ಯಮಂತ್ರಿಗಳು ಬರುವ ವೇಳೆ ಪ್ರತಿಭಟಿಸುತ್ತೇವೆಂದು ಏನು ಹೇಳಿದ್ದೆವೋ, ಅದಕ್ಕಿಂತ ನಾಲ್ಕು ಪಟ್ಟು ಅದ್ಧೂರಿಯಾಗಿ ಯುವಮೋರ್ಚಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೆಲ್ಲ ಸೇರಿ ಮುಖ್ಯಮಂತ್ರಿಗಳ ಜಿಲ್ಲಾ ಭೇಟಿಯ ವೇಳೆ ಸ್ವಾಗತ ಕೋರುತ್ತೇವೆ ಎಂದಿದ್ದಾರೆ.
ನಮ್ಮ ಹೇಳಿಕೆಯಿಂದ ಜಿಲ್ಲಾಧ್ಯಕ್ಷರು, ಮುಖ್ಯಮಂತ್ರಿಗಳು, ಗೃಹ ಸಚಿವರು ಒಟ್ಟಾರೆ ಸರ್ಕಾರ ಹಾಗೂ ಪಕ್ಷದ ವಿವಿಧ ಸ್ಥರದ ನಾಯಕರುಗಳ ಮನಸ್ಸಿಗೆ ಘಾಸಿ ಉಂಟುಮಾಡಿತ್ತು. ಈಗ ನಮ್ಮ ತಪ್ಪಿನ ಅರಿವಾಗಿದೆ. ನಮ್ಮ ನಾಯಕರುಗಳು ನಮಗೆ ತಿಳಿಸಿ ಹೇಳಿದ್ದಾರೆ. ಇದರಿಂದಾಗಿ ನಾವು ಬಹಿರಂಗ ಕ್ಷಮಾಪಣೆ ಕೋರುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕೋಟ್…
ಯಾರದ್ದೇ ಒತ್ತಡ ಎಂದಲ್ಲ. ಹಿರಿಯರ ಮಾತಿಗೆ ನಾವು ತಲೆ ಬಾಗಿದ್ದೇವೆ. ಪಕ್ಷ ನಮ್ಮನ್ನು ಬೆಳೆಸಿದೆ. ಹಿಂದುತ್ವಕ್ಕಾಗಿ ಹೋರಾಡುವ ಗುಣ ಕಲಿಸಿದೆ. ಪಕ್ಷಕ್ಕೆ ನಾವೆಂದಿಗೂ ಋಣಿಯಾಗಿದ್ದೇವೆ.
• ಶುಭಂ ಕಳಸ, ಬಿಜೆಪಿ ಯುವಮೋರ್ಚಾ ನಗರಾಧ್ಯಕ್ಷ