ಕಾರವಾರ: ಆಗಸ್ಟ್ ಅಂತ್ಯದೊಳಗೆ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಲಸಿಕಾಕರಣವಾಗಬೇಕು ಹಾಗೂ ಶೀಘ್ರವಾಗಿ ಕುಷ್ಠರೋಗ ಪತ್ತೆ ಹಚ್ಚಿ ಸೂಕ್ತವಾದ ಚಿಕಿತ್ಸೆಯಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಮ್. ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಹಾಗೂ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೋಲಿಯೋ, ಹೆಪಟೈಟಿಸ್, ದಡಾರ ಮತ್ತು ರುಬೆಲ್ಲಾ ಹೀಗೆ ಅನೇಕ ರೋಗ ಸಂಬಂಧಿತ ಮುನ್ನೆಚ್ಚರಿಕಾ ಲಸಿಕಾಕರಣ ಆಗಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಹಿರಿಯ ವೈದ್ಯಕೀಯ ಅಧಿಕಾರಿ ಡಾ.ಸಿದ್ಧಲಿಂಗಯ್ಯ ಮಾತನಾಡಿ, ಸರಿಯಾದ ಸಮಯದಲ್ಲಿ ಲಸಿಕೆಯನ್ನು ನೀಡಬೇಕು ಇಲ್ಲದಿದ್ದರೆ ಅಪಾಯವಾಗುತ್ತದೆ. ಜಿಲ್ಲೆಯಲ್ಲಿ ಲಸಿಕಾಕರಣ ಯಾವ ರೀತಿಯಾಗಿ ಪೂರ್ಣಗೊಳಿಸಬೇಕು ಮತ್ತು ಪೋಲಿಯೋ ಹೆಪಟೈಟಿಸ್ ಅಂತಹ ಇನ್ನಿತರ ರೋಗವನ್ನು ತಡೆಗಟ್ಟುವ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಆರೋಗ್ಯಾಧಿಕಾರಿ ಮಾತನಾಡಿ, ಈಗಾಗಲೇ ಕುಷ್ಠರೋಗ ಪತ್ತೆ ಹಚ್ಚಲು ಸೂಕ್ತವಾದ ತಂಡಗಳನ್ನು ರಚಿಸಿದ್ದು ಅವರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಈ ವರ್ಷ 8 ಕೇಸ್‌ಗಳು ಪತ್ತೆಯಾಗಿದ್ದು ಕುಷ್ಟರೋಗ ಕಂಡುಬಂದಂತಹ ರೋಗಿಗಳಿಗೆ ಚಿಕಿತ್ಸೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆ ಜೊತೆ ಒಬ್ಬ ಪುರುಷ ಸ್ವಯಂ ಸೇವಕನನ್ನು ನೇಮಿಸಲಾಗಿದ್ದು, ಆಗಸ್ಟ್ 16ರಿಂದ 31ರೊಳಗಾಗಿ ಮನೆ ಮನೆಗೆ ತೆರಳಿ ಪರೀಕ್ಷೆ ಮಾಡಲಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಆರ್‌ಸಿಎಚ್‌ಒ ಡಾ.ರಮೇಶ್‌ರಾವ್, ಟಿಎಚ್‌ಒ ಹಾಗೂ ಇನ್ನಿತರ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಿದ್ದರು.