Slide
Slide
Slide
previous arrow
next arrow

ದೇಶದ ಸಮಗ್ರ ಅಭಿವೃದ್ಧಿಯಲ್ಲಿ ವಿದ್ಯುತ್ ಕ್ಷೇತ್ರದ ಕೊಡುಗೆ ಅಪಾರ: ಡಾ.ಪಿಕಳೆ

300x250 AD

ಕಾರವಾರ: ದೇಶದ ಸಮಗ್ರ ಅಭಿವೃದ್ಧಿಯಲ್ಲಿ ವಿದ್ಯುತ್ ಕ್ಷೇತ್ರದ ಕೊಡುಗೆ ಹೆಚ್ಚಿದೆ. ಬೆಳಿಗ್ಗಿನಿಂದ ರಾತ್ರಿಯವರೆಗೂ ದಣಿವರಿಯದೆ ಹೆಸ್ಕಾಂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರೂ ಅವರ ಕಾರ್ಯಕ್ಕೆ ಸಾಥ್ ನೀಡಬೇಕು ಎಂದು ನಗರಸಭೆಯ ಅಧ್ಯಕ್ಷ ಡಾ.ನಿತಿನ್ ಪಿಕಳೆ ಹೇಳಿದರು.
ನಗರದ ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ಯುತ್ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾರವಾರದ ಮಟ್ಟಿಗೆ ಹೆಸ್ಕಾಂ ಒಳ್ಳೆಯ ಸೇವೆ ನೀಡುತ್ತಿದೆ. ನಮ್ಮ ನಗರಸಭೆಯ ವ್ಯಾಪ್ತಿಯ ಯಾವುದೇ ವಾರ್ಡ್ ಲ್ಲಿ ವಿದ್ಯುತ್ ಸಮಸ್ಯೆ ಎದುರಾದಾಗ ಕರೆ ಮಾಡಿದರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತವಾಗಿ ಸ್ಪಂದಿಸುತ್ತಿದ್ದಾರೆ. ಲೈನ್ ಮನ್‌ನಿಂದ ಹಿಡಿದು ಹೆಸ್ಕಾಂನ ಪ್ರತಿಯೊಬ್ಬ ನೌಕರರೂ ನಿಜವಾಗಿಯೂ ಪ್ರಶಂನಾರ್ಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕೆಲವು ಇಲಾಖೆಗಳಿಂದ ಜನರ ನಿರೀಕ್ಷೆಗಳು ಬಹಳ ಇರುತ್ತವೆ. ಆ ಎಲ್ಲಾ ನಿರೀಕ್ಷೆಗಳನ್ನು ಇಲಾಖೆಗಳು ಈಡೇರಿಸಲು ಸಾಧ್ಯವಾಗದಿದ್ದರೂ, ಸರ್ಕಾರದಿಂದ ಆಗಬೇಕಾದ ಹಾಗೂ ತಮ್ಮಿಂದಾಗುವ ಸೇವೆಯನ್ನು ನೀಡಲು ಹೆಸ್ಕಾಂ ಪ್ರಯತ್ನಿಸುತ್ತಿದೆ. ಆದರೆ ಇಲಾಖೆಯೊಳಗಿನ ಸಮಸ್ಯೆಗಳು, ಸಿಬ್ಬಂದಿಯ ಪರಿಶ್ರಮ ಜನರಿಗೆ ಅರ್ಥವಾಗುವುದಿಲ್ಲ. ಜನರಿಗೆ ಜನರ ಸಮಸ್ಯೆ ಮಾತ್ರ ಮಹತ್ವ ಎನಿಸುತ್ತದೆ. ತೌಕ್ತೆ ಚಂಡಮಾರುತದ ಸಮಯದಲ್ಲಿ ಇಡೀ ಕಾರವಾರದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿತ್ತು. ಕಂಬಗಳು ಉರುಳಿದ್ದವು, ಟ್ರಾನ್ಸ್ಫಾರ್ಮರ್‌ಗಳು ಹಾಳಾಗಿದ್ದವು. ಆದರೆ ಹೆಸ್ಕಾಂ ಸಿಬ್ಬಂದಿ ಹಗಲು- ರಾತ್ರಿ ಕೆಲಸ ಮಾಡಿ 24 ಗಂಟೆಯೊಳಗೆ ವಿದ್ಯುತ್ ನೀಡಿದ್ದಾರೆ ಎಂದು ಸ್ಮರಿಸಿದರು.
ಕದ್ರಾ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಬು ನಾಯ್ಕ ಮಾತನಾಡಿ, ಹೆಸ್ಕಾಂ ಸಿಬ್ಬಂದಿ ಕಷ್ಟಪಟ್ಟು ಹಗಲುರಾತ್ರಿ ದುಡಿಯುತ್ತಾರೆ. ಆದರೂ ಗ್ರಾಮೀಣ ಭಾಗದಲ್ಲಿ ಕೆಲವೆಡೆ ವಿದ್ಯುತ್ ಸಮಸ್ಯೆಗಳಿದ್ದು, ಅವುಗಳ ಬಗ್ಗೆ ಇನ್ನಷ್ಟು ಗಮನ ಹರಿಸಬೇಕಿದೆ ಎಂದರು.
ಬೆಳಂಬಾರ ಗ್ರಾಮ ಪಂಚಾಯತಿ ಅಧ್ಯಕ್ಷ ನಾರಾಯಣ ಮಡಿವಾಳ, ವಿದ್ಯುತ್ ಇಲಾಖೆಯಲ್ಲಿ ನೌಕರಿ ಯಾರಿಗೂ ಬೇಡ. ಬೆಂಕಿಯಲ್ಲಿ ಸುಟ್ಟಿಕೊಂಡು ಗಾಯಗಳನ್ನ ವಾಸಿ ಮಾಡಿಕೊಳ್ಳಬಹುದು. ಆದರೆ ವಿದ್ಯುತ್ ಸಹವಾಸ ಜೀವವನ್ನೇ ತೆಗೆದುಕೊಳ್ಳುತ್ತದೆ. ಸಾವು- ಬದುಕಿನ ನಡುವೆ ಹೋರಾಟಮಯ ಜೀವನ ನಡೆಸುವ ಹೆಸ್ಕಾಂ ಸಿಬ್ಬಂದಿ ಕಾರ್ಯ ಶ್ಲಾಘನೀಯ. ಇವರನ್ನ ದೀಪ ಕೊಡುವ ದೇವರು ಅಂತಲೇ ಕರೆಯಬೇಕು ಎಂದರು.
ಪ್ರಾಸ್ತಾವಿಕ ಮಾತನಾಡಿದ ಹೆಸ್ಕಾಂ ಶಿರಸಿ ವೃತ್ತದ ಅಧೀಕ್ಷಕ ಎಂಜಿನಿಯರ್ ದೀಪಕ್ ಕಾಮತ್, ನಾಗರಿಕ ಸಮಾಜದಲ್ಲಿ ಆಮ್ಲಜನಕ ಮೊದಲು, ನಂತರ ವಿದ್ಯುತ್ ಎನ್ನುತ್ತಿದ್ದರು. ಆದರೆ ಕೋವಿಡ್‌ನಿಂದಾಗಿ ವಿದ್ಯುತ್ ಇದ್ದರೆ ಆಮ್ಲಜನಕ ಎಂಬುದು ಸಾಬೀತಾಗಿದೆ. ಪಂಚಭೂತಗಳಿಗಿಂತಲೂ ಹೆಚ್ಚು ಮಹತ್ವ ವಿದ್ಯುತ್‌ಗಿದೆ. ಭಾರತ ಈಗ ವಿದೇಶಗಳಿಗೂ ವಿದ್ಯುತ್ ಅನ್ನು ಪೂರೈಸುತ್ತಿದೆ ಎಂದರು.
ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ 500 ಕೋಟಿಗೂ ಅಧಿಕ ಕಾಮಗಾರಿಗಳನ್ನು ಮಾಡಿದ್ದೇವೆ. ದೀನದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆಯಲ್ಲಿ 7,530 ಮನೆಗಳಿಗೆ, ಹರ್ ಘರ್ ಬಿಜಲಿ- ಸೌಭಾಗ್ಯ ಯೋಜನೆಯಲ್ಲಿ 7,516, ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯಲ್ಲಿ 11 ಕೋಟಿಯ ಕಾಮಗಾರಿಗಳನ್ನು ಕೈಗೊಂಡಿದ್ದೇವೆ. ಇತ್ತೀಚಿನ ರಾಜ್ಯ ಸರ್ಕಾರದ ಬೆಳಕು ಯೋಜನೆಯಲ್ಲಿ 9389 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ 4,449 ಮನೆಗಳಿಗೆ ವಿದ್ಯುತ್ ನೀಡಿದ್ದೇವೆ. ಬಾಕಿ ಉಳಿದ 4,940 ಮನೆಗಳಿಗೂ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ 1,309 ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ನೀಡಿದ್ದೇವೆ. ಕಾರವಾರದ ಬಹುಬೇಡಿಕೆಯಾಗಿದ್ದ ಕೋಣೆ 33/11 ಕೆವಿ 25 ಮೆಗಾ ವ್ಯಾಟ್ ಶಕ್ತಿ ಪರಿವರ್ತಕಗಳನ್ನು 28 ಮೆಗಾ ವ್ಯಾಟ್ ಶಕ್ತಿ ಪರಿವರ್ತಕಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಇದರಿಂದ ಕಾರವಾರ ನಗರದಲ್ಲಿನ ನಿರಂತರವಾಗಿ ವಿದ್ಯುತ್ ಪೂರೈಸಲು ಅನುಕೂಲವಾಗಲಿದೆ ಎಂದರು.
ಸಾಯಿಶ್ರೀ ಶೇಟ್ ಪ್ರಾರ್ಥಿಸಿದರು. ಸಂತೋಷ್ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಶಿವು ಮಲ್ಲು ವಂದನಾರ್ಪಣೆಗೈದರು. ಮುಡಿಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸೀಮಾ ನಾಯ್ಕ ಮಾತನಾಡಿದರು. ಕೂಡಗಿಯ ಎನ್‌ಟಿಪಿಸಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಸಂದೀಪ್ ತಳೇಕರ್, ಕೆಪಿಟಿಸಿಎಲ್ ಶಿರಸಿ ಕಾರ್ಯನಿರ್ವಾಹಕ ಎಂಜಿನಿಯರ್ ಹರೀಶ್ ನಾಯ್ಕ, ಶಿರಸಿ ವೃತ್ತದ ಡಿಸಿಎ ಶಶಿಕಾಂತ್ ಪ್ರಭು, ಶಿರಸಿ ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಸುನೀಲ್ ಶೇಟ್, ದಾಂಡೇಲಿ ಕಾರ್ಯನಿರ್ವಾಹಕ ಎಂಜಿನಿಯರ್ ಪುರುಷೋತ್ತಮ ಮಲ್ಯ, ಹೊನ್ನಾವರ ಕಾರ್ಯನಿರ್ವಾಹಕ ಎಂಜಿನಿಯರ್ ವಿನೋದ್ ಭಾಗ್ವತ್, ಕಾರವಾರ ಕಾರ್ಯನಿರ್ವಾಹಕ ಎಂಜಿನಿಯರ್ ರೋಶ್ನಿ ಪೆಡ್ನೇಕರ್ ಮುಂತಾದವರು ಇದ್ದರು.


ಕಿರುಚಿತ್ರಗಳ ಪ್ರದರ್ಶನ: ಕಾರ್ಯಕ್ರಮದಲ್ಲಿ ಮನೆಗಳ ವಿದ್ಯುದ್ದೀಕರಣದ, ಒಂದೇ ರಾಷ್ಟ್ರ ಒಂದೇ ವಿದ್ಯುತ್ ಜಾಲ, ಗ್ರಾಹಕರ ಹಕ್ಕುಗಳು, ನವೀಕರಿಸಬಹುದಾದ ಇಂಧನಗಳ ಕುರಿತು, ಇಂಧನ ಸಾಮರ್ಥ್ಯ ವೃದ್ಧಿಸುವ ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು. ಶಿರಸಿ ಹೆಸ್ಕಾಂನ ಜೈಕುಮಾರ್ ಮತ್ತು ಸಂಗಡಿಗರಿಂದ ನುಕ್ಕಡ್ ನಾಟಕ ಹಾಗೂ ಯಕ್ಷಗಾನ ಪ್ರದರ್ಶನ, ಗೌತಮಿ ನಾಯ್ಕ ಅವರಿಂದ ಭರತನಾಟ್ಯ, ರಸಮಂಜರಿ ಕಾರ್ಯಕ್ರಮಗಳು ನಡೆದವು.

300x250 AD
Share This
300x250 AD
300x250 AD
300x250 AD
Back to top