ಕಾರವಾರ: ದಕ್ಷಿಣ ಕನ್ನಡದಲ್ಲಿ ಕಳೆದೊಂದು ವಾರದಲ್ಲೇ ಮೂರು ಕೊಲೆಗಳಾಗಿದ್ದು, ರಾಜ್ಯದಲ್ಲಿ ಅಶಾಂತಿ ಸೃಷ್ಟಿಗೆ ಕಾರಣವಾಗಿದೆ. ಕರಾವಳಿ ಜಿಲ್ಲೆಯಲ್ಲಿ ಈ ಕೃತ್ಯಗಳು ನಡೆದಿರುವ ಹಿನ್ನೆಲೆಯೆಲ್ಲಿ ಕೋಮು ಸೂಕ್ಷ್ಮ ಉತ್ತರ ಕನ್ನಡ ಜಿಲ್ಲೆಗೆ ಇದರ ಗಾಳಿ ತಾಕದಂತೆ ನೋಡಿಕೊಳ್ಳಲು ಪೊಲೀಸರು ಅಲರ್ಟ್ ಆಗಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್, ‘ಉತ್ತರ ಕನ್ನಡ ಜಿಲ್ಲೆ ಸದ್ಯ ಶಾಂತವಾಗಿಯೇ ಇದೆ. ಜಿಲ್ಲೆಯ ಜನರು ಕೂಡ ಶಾಂತಿ- ಸೌಹಾರ್ದತೆ ಎಂದಿಗೂ ಕಾಪಾಡಿಕೊಳ್ಳುತ್ತಾರೆಂಬ ಭರವಸೆ ಇದೆ. ಆದರೂ ಕೂಡ ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಜಿಲ್ಲೆಯಲ್ಲಿ ಇನ್ನಷ್ಟು ಹೆಚ್ಚು ಜಾಗರೂಕರಾಗಿರಲು ಸೂಚಿಸಿದ್ದೇನೆ’ ಎಂದು ತಿಳಿಸಿದ್ದಾರೆ.
‘ರಾತ್ರಿ ವೇಳೆಯಲ್ಲಿ ಗಸ್ತು ತಿರುಗುವ ವೇಳೆ ಯಾರೇ ಅನುಮಾನಾಸ್ಪದ ವ್ಯಕ್ತಿ ಕಂಡುಬಂದಲ್ಲಿ ಅಥವಾ ಯಾವುದೇ ಅಹಿತಕರ ಘಟನೆಗಳು ನಡೆದಿದ್ದು ಕಂಡುಬಂದಲ್ಲಿ ತಕ್ಷಣವೇ ಪ್ರತಿಕ್ರಿಯಿಸಲು ಸೂಚಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಲು ಹೊರ ಜಿಲ್ಲೆಗಳಿಂದ ಬರುವ ವಾಹನಗಳನ್ನು ಚೆಕ್‌ಪೋಸ್ಟ್ಗಳಲ್ಲಿ ಸಮರ್ಪಕವಾಗಿ ಪರಿಶೀಲಿಸಲು ತಿಳಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಭಂಗಕ್ಕೆ ಎಡೆಮಾಡಿಕೊಡುವಂಥ ಸಂದೇಶಗಳನ್ನು ರವಾನಿಸುವವರ ಮೇಲೆ ನಮ್ಮ ನುರಿತ ತಂಡ ಕಣ್ಣಿಟ್ಟಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಶಾಂತಿ- ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಎಚ್ಚರಿಕೆ ವಹಿಸಲಾಗುತ್ತಿದ್ದು, ಸಾರ್ವಜನಿಕರು ಕೂಡ ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು’ ಎಂದು ಮನವಿ ಮಾಡಿಕೊಂಡಿದ್ದಾರೆ.