ಯಲ್ಲಾಪುರ: ಎಸ್‌ಎಸ್‌ಎಲ್‌ಸಿ ಕನ್ನಡ ಪಠ್ಯ `ಪರಿಸರ ಪಾಠ’ ಮಾಡಿರುವ ಶಿವಾನಂದ ಕಳವೆ ಇದೀಗ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಬೆರೆಯುತ್ತಿದ್ದಾರೆ. ತಮ್ಮ ಎಂದಿನ ಪರಿಸರ ಪಾಠದ ಜೊತೆ ಮಕ್ಕಳಿಗೆ ಬದುಕಿನ ಪಾಠ ಮಾಡುತ್ತಿದ್ದಾರೆ. ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಅವರು ಹಸ್ತಾಕ್ಷರ ನೀಡುತ್ತಿದ್ದಾರೆ.
ತಾಲೂಕಿನ ವಿಶ್ವದರ್ಶನ ಕನ್ನಡ ಮಾಧ್ಯಮ ಶಾಲೆಯಲ್ಲಿ ಅವರು ಗುರುವಾರ ಪರಿಸರ ಪಾಠ ಮಾಡಿದರು. ಬ್ರಿಟೀಷರು ಭಾರತಕ್ಕೆ ಬರುವ ಮುನ್ನ ಇಲ್ಲಿದ್ದ ಪರಿಸ್ಥಿತಿ, ನಂತರ ಆದ ಬೆಳವಣಿಗೆಗಳು, ನೀರಿನ ಮಹತ್ವ, ಕಾಳು ಮೆಣಸಿನ ಪ್ರವೇಶ, ಹುಲಿ ಬೇಟೆಯ ಸತ್ಯ, ಹಸಿವು-ಬಡತನದ ನಡುವೆ ಜನ ಕಟ್ಟಿಕೊಂಡ ಬದುಕು ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಜಿಲ್ಲೆ ಕಳೆದುಕೊಂಡ ಹಲವು ಸಂಗತಿಗಳ ಬಗ್ಗೆ ಅವರು ದಾಖಲೆಗಳನ್ನು ಹಂಚಿಕೊಂಡರು. ಜಿಲ್ಲೆಯಲ್ಲಿ ನಡೆದ ಪರಿಸರ ಹೋರಾಟಗಳ ಬಗ್ಗೆ ವಿವರಿಸಿದರು.
‘ಮೊದಲು 20 ನೇಗಿಲು ಹೊಂದಿದ್ದವನನ್ನು ಶ್ರೀಮಂತ ಎಂದು ಗುರುತಿಸಲಾಗುತ್ತಿತ್ತು. ಇದೀಗ ಹೆದ್ದಾರಿ ಪಕ್ಕ ಭೂಮಿ ಇದ್ದವರನ್ನು ಶ್ರೀಮಂತ ಎನ್ನಲಾಗುತ್ತದೆ. 1874ರಲ್ಲಿ ಚಕ್ಕಡಿ ಗಾಡಿ ಓಡಾಡುತ್ತಿದ್ದ ಸ್ಥಳ ಇದೀಗ ಹೆದ್ದಾರಿಯಾಗಿದೆ. ಬದಲಾದ ಕಾಲಘಟ್ಟದಲ್ಲಿ ಅಭಿವೃದ್ಧಿಯ ಜೊತೆ ಪೃಕೃತಿ ಆರಾಧನೆ ಅತಿ ಮುಖ್ಯವಾಗಿದೆ’ ಎಂದು ಅವರು ಕರೆ ನೀಡಿದರು.