ದಾಂಡೇಲಿ: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಪ್ರವೀಣ್ ನೆಟ್ಟಾರ್ ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸಿ, ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಕೂಡಲೆ ಬಂಧಿಸಿ, ಜೀವಾವಧಿ ಶಿಕ್ಷೆಯನ್ನು ವಿಧಿಸಬೇಕೆಂದು ಆಗ್ರಹಿಸಿ ನಗರದ ಬಿಜೆಪಿ ಯುವ ಮೋರ್ಚಾದ ವತಿಯಿಂದ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗುರುವಾರ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ ರಾಘವೇಂದ್ರ ಪೂಜೇರಿಯವರ ಮೂಲಕ ಸಲ್ಲಿಸಲಾಗಿದೆ.
ಮುಖ್ಯಮಂತ್ರಿಗಳಿಗೆ ಬರೆದ ಮನವಿಯಲ್ಲಿ, ರಾಜ್ಯದಲ್ಲಿ ತಿಂಗಳಿಗೆ ಒಂದೆರಡು ಹಿಂದೂ ಕಾರ್ಯಕರ್ತರು ಹೆಣವಾಗುತ್ತಿದ್ದಾರೆ. ಇದೇ ರೀತಿ ಇನ್ನೆಷ್ಟು ಅಮಾಯಕ ಹಿಂದೂ ಕಾರ್ಯಕರ್ತರು ಬಲಿಯಾಗುತ್ತಾರೋ ಎಂಬ ಆತಂಕ ಎದುರಾಗಿದೆ. ಕಾಣದ ಕೈಗಳು ಮತ್ತು ವಿಕೃತ ಮನಸ್ಸಿನವರು ಈ ದೇಶದ ಕಾನೂನನ್ನು ಗಾಳಿಗೆ ತೂರಿ, ಇಂಥಹ ಹೇಯ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಪಿಎಫ್‌ಐ ಮತ್ತು ಎಸ್.ಡಿ.ಪಿ.ಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಪ್ರವೀಣ್ ನೆಟ್ಟಾರ್ ಅವರನ್ನು ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿಯನ್ನು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಈರಯ್ಯಾ ಸಾಲಿಮಠ, ಪ್ರಧಾನ ಕಾರ್ಯದರ್ಶಿ ಸಂತೋಷ್ ರಾಜ್.ಡಿ, ಕರ‍್ಯದರ್ಶಿಗಳಾದ ನಮನ್ ಶೆಟ್ಟಿ, ರೋಹಿತ್ ಮಾಲವಾಡೆ, ವಿನಾಯಕ ರಾಯಭಾಗಕರ ಅವರು ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಚಂದ್ರಕಾಂತ ಕ್ಷೀರಸಾಗರ, ಪಕ್ಷದ ಪ್ರಮುಖರುಗಳಾದ ಸುಧಾಕರ ರೆಡ್ಡಿ, ರವಿ ಗಾಂವಕರ, ಮಿಥುನ್ ನಾಯಕ, ಶ್ರೀನಿವಾಸ ಅಂಕೆಯವರ, ಗೋಪಾಲಸಿಂಗ್ ರಜಪೂತ್, ರಾಮ ನಾಯ್ಡು, ಯುವರಾಜ್.ಬಿ, ಬೊಮ್ಮು ವರ್ಕೆ, ವಿಠ್ಠಲ ಕಲಬಾವಿ, ಬಾಬು ಕುಳಗಿ, ಸಂತೋಷ್.ಎನ್.ಡಿ, ನಗರ ಸಭಾ ಸದಸ್ಯರುಗಳಾದ ಬುದ್ದಿವಂತಗೌಡ ಪಾಟೀಲ, ಪದ್ಮಜಾ ಪ್ರವೀಣ ಜನ್ನು, ರಮಾ ರವೀಂದ್ರ ಮೊದಲಾದವರು ಇದ್ದರು.