ಶಿರಸಿ: ರಾಜ್ಯದಲ್ಲಿ ಜನಸಾಮಾನ್ಯರಿಗೆ ರಕ್ಷಣೆ ನೀಡದ ಬಿಜೆಪಿ ಸರಕಾರವನ್ನು ವಿಸರ್ಜನೆ ಮಾಡಿ ಜನಾದೇಶಕ್ಕೆ ಹೋಗಬೇಕೆಂದು ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ ಆಗ್ರಹಿಸಿದ್ದಾರೆ.
ಅವರು ಗುರುವಾರ ಹಿಂದುಪರ ಸಂಘಟನೆಯ ಪ್ರವೀಣ ನೆಟ್ಟಾರು ಬರ್ಬರ ಹತ್ಯೆಯನ್ನು ಖಂಡಿಸಿ ಹಳೆಬಸ್ ನಿಲ್ದಾಣದ ಬಳಿ ನೆಟ್ಟಾರು ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ ಜನಸಾಮಾನ್ಯರ ಕಗ್ಗೊಲೆ ನಿರಂತರವಾಗಿ ನಡೆಯುತ್ತಿದೆ. ಒಂದೆಡೆ ಕೊಲೆ ಜನರ ನಡೆಯುತ್ತಿದ್ದರೆ, ಇನ್ನೊಂದೆಡೆ ಭ್ರಷ್ಟಾಚಾರ ನಡೆಯುತ್ತಿದೆ. ದೇಶದ ಜನರ ಜೀವ ಕಾಪಾಡದ ಸರಕಾರವನ್ನು ತಕ್ಷಣಕ್ಕೆ ವಜಾಗೊಳಿಸಬೇಕೆಂದು ಅವರು ರಾಷ್ಟ್ರಪತಿಗಳಿಗೆ ಆಗ್ರಹಿಸಿದರು.
ಯಾರದ್ದೇ ಅಮಾಯಕನ ಕೊಲೆ ನಡೆದರೂ ಅದನ್ನು ಪ್ರತಿಯೊಬ್ಬರೂ ಖಂಡಿಸಬೇಕಾಗಿರುವುದು ಪ್ರತಿಯೊಬ್ಬನ ಕರ್ತವ್ಯವಾಗಬೇಕು. ರಾಜ್ಯದಲ್ಲಿ ಕಾನೂನು ವ್ಯವಸ್ಥೆಗೆಟ್ಟಿರುವುದರಿಂದಲೇ ಕೊಲೆಗಳು ರಾಜಾರೋಷವಾಗಿ ನಡೆಯುತ್ತಿದೆ. ಈ ಸರಕಾರದಲ್ಲಿ ಪೊಲೀಸರಿಗೆ ಇರಬೇಕಾದ ಅಧಿಕಾರ ನೀಡಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡದ ಸರಕಾರ ಇದ್ದರೆಷ್ಟು ಹೋದರೆಷ್ಟೆಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ್ರು, ಜಿಲ್ಲಾ ಕಾರ್ಯದರ್ಶಿ ಎಸ್.ಕೆ.ಭಾಗವತ್, ಮಹಿಳಾ ಅದ್ಯಕ್ಷೆ ಗೀತಾ ಶೆಟ್ಟಿ, ಪ್ರಮುಖರಾದ ಪ್ರದೀಪ ಶೆಟ್ಟಿ, ಸಂತೋಷ ಶೆಟ್ಟಿ, ಪ್ರಸನ್ನ ಶೆಟ್ಟಿ, ಯಶವಂತ ಮರಾಠೆ, ಗೀತಾ ಬೋವಿ, ತಾರಾ ನಾಯ್ಕ ಮುಂತಾದವರು ಇದ್ದರು.